800 ಕಿಮೀ ಶ್ರೇಣಿಯ ಬ್ರಹ್ಮೋಸ್ ಕ್ಷಿಪಣಿಗಳ ಪರೀಕ್ಷೆ; ಮುಂದಿನ ವರ್ಷವೇ ಸೇನೆಯ ಬಲ ಹೆಚ್ಚಿಸಲಿವೆ ಈ ಪ್ರಬಲ ಮಿಸೈಲ್ಗಳು

Share with

ನವದೆಹಲಿ, ಅಕ್ಟೋಬರ್ 20: ಪಾಕಿಸ್ತಾನ ವಿರುದ್ಧದ ಆಪರೇಷನ್ ಸಿಂದೂರ್ನಲ್ಲಿ ತನ್ನ ಸಾಮರ್ಥ್ಯ ಸಾಬೀತು ಮಾಡಿದ್ದ ಬ್ರಹ್ಮೋಸ್ ಕ್ಷಿಪಣಿಯ (BrahMos missile) ಮುಂದುವರಿದ ದರ್ಜೆಯ ಕ್ಷಿಪಣಿ ಸದ್ಯದಲ್ಲೇ ಭಾರತೀಯ ಸೇನೆಯ (Indian army) ಬತ್ತಳಿಕೆ ಸೇರಲಿದೆ. 800 ಕಿಮೀ ದೂರ ಕ್ರಮಿಸಬಲ್ಲ ಬ್ರಹ್ಮೋಸ್ ಸೂಪರ್ಸೋನಿಕ್ ಕ್ರೂಸ್ ಮಿಸೈಲ್ಗಳ ಪರೀಕ್ಷೆಗಳನ್ನು ಸದ್ಯಕ್ಕೆ ನಡೆಸಲಾಗುತ್ತಿದೆ. 2027ರೊಳಗೆ ಈ ಪ್ರಬಲ ಕ್ಷಿಪಣಿಗಳು ಸೇನೆಗೆ ನಿಯೋಜಿತವಾಗಲಿವೆ. ಇವುಗಳ ಜೊತೆಗೆ, 200 ಕಿಮೀ ದೂರ ಕ್ರಮಿಸಿ ಟಾರ್ಗೆಟ್ ಹೊಡೆಯಬಲ್ಲ ಏರ್ ಟು ಏರ್ ಅಸ್ತ್ರ ಕ್ಷಿಪಣಿಗಳೂ (ASTRA missiles) ಕೂಡ ಇನ್ನೊಂದು ವರ್ಷದಲ್ಲಿ ನಿಯೋಜನೆಗೆ ಸಿದ್ಧ ಇರಲಿವೆ.

ಈಗಿರುವ ಬ್ರಹ್ಮೋಸ್ ಮಿಸೈಲ್ 450 ಕಿಮೀ ಶ್ರೇಣಿ ಹೊಂದಿದೆ. ಇದರ ವೇಗ ಸುಮಾರು 2.8 ಮ್ಯಾಚ್ನಷ್ಟಿದೆ. ಅಂದರೆ ಸುಮಾರು 4,000 ಕಿಮೀ ವೇಗದಲ್ಲಿ ಇವು ಸಾಗಿ ವೈರಿಗಳನ್ನು ಚಿಂದಿ ಉಡಾಯಿಸಬಲ್ಲುದು. ಇದೀಗ ಈ ಕ್ಷಿಪಣಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗಿದೆ.

ಹೊಸ ಬ್ರಹ್ಮೋಸ್ ಕ್ಷಿಪಣಿ ದೂರ ಕ್ರಮಿಸುವ ಸಾಮರ್ಥ್ಯ 800 ಕಿಮೀಗೆ ಹೆಚ್ಚಿದೆ. ಅದರ ರಾಮ್ಜೆಟ್ ಎಂಜಿನ್ನಲ್ಲಿ ಮಾರ್ಪಾಡುಗಳನ್ನು ಮಾಡಲಾಗಿದೆ. ಅದಕ್ಕೆ ಅಳವಡಿಸಲಾಗಿರುವ ನ್ಯಾವಿಗೇಶನ್ ಸಿಸ್ಟಂಗಳ ಸಂಯೋಜನೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಪರೀಕ್ಷಿಸಲಾಗುತ್ತಿದೆ. ಇದು ಯಶಸ್ವಿಯಾದಲ್ಲಿ ಹೊಸ ಬ್ರಹ್ಮೋಸ್ ಕ್ಷಿಪಣಿ ಇನ್ನೂ ಹೆಚ್ಚಿನ ಭೀಕರ ಅಸ್ತ್ರವಾಗಿ ಪರಿಣಮಿಸಲಿದೆ.

ಭಾರತೀಯ ನೌಕಾಪಡೆಯ ಅಗತ್ಯಕ್ಕೂ ಬೇಕಾದಂತೆ ಬ್ರಹ್ಮೋಸ್ ಕ್ಷಿಪಣಿಯನ್ನು ಅಪ್ಗ್ರೇಡ್ ಮಾಡುವ ಸಂಭವವೂ ಇದೆ. ಈಗಾಗಲೇ ಅಭಿವೃದ್ಧಿಯಾಗಿರುವ 800 ಕಿಮೀ ಶ್ರೇಣಿಯ ಬ್ರಹ್ಮೋಸ್ ಕ್ಷಿಪಣಿಯ ತಂತ್ರಾಂಶದಲ್ಲಿ ಬದಲಾವಣೆ ತಂದು ನೌಕಾಪಡೆಗೆ ಬೇಕಾದ ರೀತಿಯಲ್ಲಿ ನಿರ್ಮಿಸಲು ಸಾಧ್ಯ.


Share with

Leave a Reply

Your email address will not be published. Required fields are marked *