ಕುಂದಾಪುರ: ಸರಕಾರದ ಅನ್ನ ಭಾಗ್ಯ ಅಕ್ಕಿಯನ್ನು ಯಾವುದೇ ದಾಖಲೆಯಿಲ್ಲದೆ ತುಂಬಿಸಿ, ದಾಸ್ತಾನು ಇರಿಸಿದ್ದ ಆರೋಪಿಗಳಾದ ಅಬ್ದುಲ್ ಅಜೀಜ್ ಹಾಗೂ ಅಬ್ದುಲ್ ಅಜೀಜ್ ಗೆ ಕುಂದಾಪುರದ ಮೂರನೇ ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಲಯ 1 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ.
ಆರೋಪಿಗಳು 2021ರ ಜ.27 ರಂದು ಗಂಗೊಳ್ಳಿಯ ಬಾಷಾ ಮೊಹಲ್ಲಾ ಎಂಬಲ್ಲಿ 48 ಚೀಲಗಳಲ್ಲಿ 36 ಸಾವಿರ ರೂ. ಮೌಲ್ಯದ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಇರಿಸಿದ್ದರು. ಈ ಸಂಬಂಧ ಆಹಾರ ನಿರೀಕ್ಷಕ ಸುರೇಶ್ ಎಚ್.ಎಸ್. ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಕುರಿತಂತೆ ಆಗಿನ ಗಂಗೊಳ್ಳಿ ಪಿಎಸ್ ಐಗಳಾದ ಭೀಮಾಶಂಕರ್ ಹಾಗೂ ನಂಜಾ ನಾಯ್ಕ ಅವರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಆ ಬಳಿಕ ಪಿಎಸ್ ಐ ಪವನ್ ನಾಯಕ್ ಅವರು ಸಾಕ್ಷಿದಾರರನ್ನು ಕೋರ್ಟ್ ಗೆ ಹಾಜರುಪಡಿಸಲು ನೆರವಾಗಿದ್ದರು.
ಈ ಪ್ರಕರಣದ ಕುರಿತಂತೆ ವಿಚಾರಣೆ ನಡೆಸಿದ ಮೂರನೇ ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ ಮಣಿಕಂಠ ಎಂ. ಎಸ್. ಅವರು ಆ.1 ರಂದು ತೀರ್ಪು ನೀಡಿದ್ದಾರೆ. ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕಿ ಉಮಾ ದಾಮೋದರ ನಾಯ್ಕ ಅವರು ವಾದ ಮಂಡಿಸಿದ್ದರು.




