ಕೋಟ್ಯಂತರ ರೂಪಾಯಿ ವೆಚ್ಚದ ಗುತ್ತಿಗೆಗಳ ಕುರಿತು ಸಮಗ್ರ ತನಿಖೆಗೆ ಸಾರ್ವಜನಿಕರ ಆಗ್ರಹ

Share with


ಹಾಸನ: ಇನ್ನೇನು ಕೆಲವೇ ದಿನಗಳಲ್ಲಿ ಪ್ರಸಿದ್ಧ ಹಾಸನಾಂಬ ದೇವಿಯ ಜಾತ್ರೆ ಆರಂಭವಾಗಲಿದ್ದು, ದೇವಿಯ ದರ್ಶನ ಪಡೆಯಲು ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ. ಈ ನಡುವೆ, ಜಾತ್ರೆಯ ಹೆಸರಿನಲ್ಲಿ ಪ್ರತಿವರ್ಷ ನಡೆಯುವ ಕೋಟ್ಯಂತರ ರೂಪಾಯಿ ವೆಚ್ಚ, ಗುತ್ತಿಗೆ ಹಂಚಿಕೆ ಹಾಗೂ ಹಣಕಾಸಿನ ನಿರ್ವಹಣೆಯ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ತೀವ್ರಗೊಂಡಿವೆ.ಹಾಸನಾಂಬ ಜಾತ್ರೆಯ ಖರ್ಚಿನ ಲೆಕ್ಕಾಚಾರದ ಕುರಿತು ಹಲವು ವರ್ಷಗಳಿಂದ ಕೇಳಿಬರುತ್ತಿದ್ದ ಪ್ರಶ್ನೆಗಳು ಇದೀಗ ಬಹಿರಂಗವಾಗಿ ಚರ್ಚೆಯಾಗುತ್ತಿವೆ.

ಪ್ರತಿವರ್ಷ ಜಾತ್ರೆಗೆ ಸಂಬಂಧಿಸಿದ ಬಹುತೇಕ ಕಾಮಗಾರಿಗಳನ್ನು ಒಂದೇ ಸಂಸ್ಥೆ ನಿರ್ವಹಿಸುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ನಾಗ್‌ ಈವೆಂಟ್ಸ್‌ ಸಂಸ್ಥೆಯ ನಾಗರಾಜ್‌ ಹಲವು ವರ್ಷಗಳಿಂದ ಜಾತ್ರೆಯ ವಿವಿಧ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ ಎಂಬ ವಿಚಾರವನ್ನು ಮುಂದಿಟ್ಟುಕೊಂಡು, ಗುತ್ತಿಗೆ ಪ್ರಕ್ರಿಯೆಯಲ್ಲಿ ನಿಜವಾದ ಸ್ಪರ್ಧೆ ನಡೆಯುತ್ತಿದೆಯೇ ಎಂಬ ಪ್ರಶ್ನೆಗಳನ್ನು ಸಾರ್ವಜನಿಕರು ಎತ್ತುತ್ತಿದ್ದಾರೆ. ವಿವಿಧ ಇಲಾಖೆಗಳ ಮೂಲಕ ಪ್ರತ್ಯೇಕ ಕಾಮಗಾರಿಗಳಿಗೆ ಟೆಂಡರ್‌ ಕರೆಯಲಾಗುತ್ತಿದ್ದರೂ, ಹೆಚ್ಚಿನ ಕೆಲಸಗಳು ಒಂದೇ ವ್ಯಕ್ತಿ ಅಥವಾ ಸಂಸ್ಥೆಯ ನಿಯಂತ್ರಣಕ್ಕೆ ಸೀಮಿತವಾಗಿವೆಯೇ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ.
ಈ ವ್ಯವಸ್ಥೆಯಲ್ಲಿ ಪಾರದರ್ಶಕತೆ ಎಷ್ಟಿದೆ, ಟೆಂಡರ್‌ ಪ್ರಕ್ರಿಯೆಗಳು ನಿಯಮಾನುಸಾರ ನಡೆದಿವೆಯೇ ಮತ್ತು ಸಾರ್ವಜನಿಕ ಹಣ ಸಮರ್ಪಕವಾಗಿ ಬಳಕೆಯಾಗಿದೆಯೇ ಎಂಬುದರ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕಿದೆ. ಈ ಆರೋಪಗಳ ಸತ್ಯಾಸತ್ಯತೆ ತಿಳಿಯಲು ದಾಖಲೆಗಳ ಆಧಾರದ ಮೇಲೆ ನಿಷ್ಪಕ್ಷಪಾತ ಪರಿಶೀಲನೆ ನಡೆಸುವುದು ಅತ್ಯಗತ್ಯವಾಗಿದೆ.

ಹಾಸನಾಂಬ ಜಾತ್ರೆ ಜಿಲ್ಲೆಯ ಧಾರ್ಮಿಕ ಪರಂಪರೆ, ಭಕ್ತಿ ಮತ್ತು ಗೌರವದ ಪ್ರತೀಕವಾಗಿದೆ. ಈ ಉತ್ಸವದ ಹೆಸರಿನಲ್ಲಿ ಹಣಕಾಸಿನ ಅಕ್ರಮಗಳು ನಡೆದಿವೆ ಎಂಬ ಅನುಮಾನಗಳಿಗೆ ತೆರೆ ಎಳೆದು, ಗುತ್ತಿಗೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಖಚಿತಪಡಿಸುವುದು ಜಿಲ್ಲಾಡಳಿತದ ಜವಾಬ್ದಾರಿಯಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಆರೋಪಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಂಡು, ಜಾತ್ರೆಯ ಘನತೆ ಮತ್ತು ಜಿಲ್ಲೆಯ ಗೌರವವನ್ನು ಉಳಿಸಬೇಕು ಎಂಬುದು ಸಾರ್ವಜನಿಕರ ಆಶಯವಾಗಿದೆ.


Share with

Tags:

Leave a Reply

Your email address will not be published. Required fields are marked *