ಶಿಕ್ಷಕರ ಕೊರತೆ: ಸರ್ಕಾರಿ ಶಾಲೆಗಳ ವಿಲೀನಕ್ಕೆ ಶಿಕ್ಷಣ ಇಲಾಖೆ ಚಿಂತನೆ

Share with

ಬೆಂಗಳೂರು, ನವೆಂಬರ್ 14: ಕರ್ನಾಟಕದಲ್ಲಿ (Karnataka) ಬರೋಬ್ಬರಿ 50 ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಕರ ಕೊರತೆ ಇದೆ. ಮಾದರಿ ಶಾಲೆ (Schools) ಸೇರಿದಂತೆ ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಈ ಶಿಕ್ಷಕರ ಕೊರತೆ ಸರಿಪಡಿಸಲು ಶಿಕ್ಷಣ ಇಲಾಖೆ ಶಾಲೆಗಳ ವಿಲೀನದ ಚಿಂತನೆಗೆ ಮುಂದಾಗಿರುವ ಆರೋಪ ಶುರುವಾಗಿದೆ.

ಸರ್ಕಾರಿ ಶಾಲೆಗಳ ವಿಲೀನಕ್ಕೆ ಸರ್ಕಾರ ಮುಂದಾಯ್ತಾ ಎಂಬ ಮಾತುಗಳು ಕೇಳಿಬರುತ್ತಿವೆ. ಕಡಿಮೆ ಮಕ್ಕಳ ಸಂಖ್ಯೆ ಮುಂದಿಟ್ಟುಕೊಂಡು ಶಿಕ್ಷಕರ ಕೊರತೆ ಸರಿಪಡಿಸಲು ಸರ್ಕಾರಿ ಶಾಲೆಗಳನ್ನ ಮುಚ್ಚಲು ಶಿಕ್ಷಣ ಇಲಾಖೆ ಪ್ಲಾನ್ ಮಾಡಲಾಗಿದೆ ಎನ್ನಲಾಗುತ್ತಿದೆ.

ರಾಜ್ಯದಲ್ಲಿ 150 ಶಾಲೆಗಳಲ್ಲಿ 0 ಮಕ್ಕಳಿರುವ ಶಾಲೆಗಳಿವೆ. 0 ದಿಂದ 10 ಮಕ್ಕಳಿರುವ 3646 ಶಾಲೆಗಳಿವೆ. ಈ ಶಾಲೆಗಳಲ್ಲಿ ಸಾವಿರಾರು ಶಿಕ್ಷಕರಿದ್ದಾರೆ. ಹೀಗಾಗಿ ಕಡಿಮೆ ವಿದ್ಯಾರ್ಥಿಗಳು ಅಂದರೆ 10ಕ್ಕಿಂತ ಕಡಿಮೆ ದಾಖಲಾತಿ ಇರುವ ಶಾಲೆಗಳನ್ನ ವಿಲೀನ ಪ್ರಕ್ರಿಯೆಗೆ ಶಿಕ್ಷಣ ಇಲಾಖೆ ಚಿಂತನೆ ಶುರುಮಾಡಿದೆ ಎನ್ನಲಾಗಿದೆ.

ಸುತ್ತೋಲೆ ವೈರಲ್
ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹೊಂಗನೂರಿನ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯನ್ನು ಒಟ್ಟುಗೂಡಿಸಿ ಕರ್ನಾಟಕ ಪಬ್ಲಿಕ್‌ ಶಾಲೆಯಾಗಿ ಪರಿವರ್ತಿಸಲು ಅನುಮತಿ ನೀಡಿರುವ ಶಿಕ್ಷಣ ಇಲಾಖೆ, ಈ ಶಾಲೆಯ ಸುತ್ತಲ 6 ಕಿಮೀ ವ್ಯಾಪ್ತಿಯ 7 ಪ್ರಾಥಮಿಕ ಶಾಲೆಗಳನ್ನು ವಿಲೀನಗೊಳಿಸಲು ಒಪ್ಪಿಗೆ ನೀಡಿದೆ. ಅದರಂತೆ ಶಾಲೆಗಳ ವಿಲೀನಕ್ಕೆ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿ ಕ್ರಮ ವಹಿಸಿ ಸುತ್ತೋಲೆ ನೀಡಿದ್ದು, ಸದ್ಯ ಸಾಕಷ್ಟು ವೈರಲ್ ಆಗುತ್ತಿದೆ.

ಇನ್ನು 2026-27ನೇ ಸಾಲಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಹೊಸದಾಗಿ 700 ಕೆಪಿಎಸ್ ಶಾಲೆ ಆರಂಭಿಸಲು ಈಗಾಗಲೇ ಸರ್ಕಾರ ಅನುಮತಿ ನೀಡಿದೆ. ಈ ಒಂದೊಂದು ಕೆಪಿಎಸ್‌ ಶಾಲೆಗಳಿಗೂ ಸುತ್ತಮುತ್ತಲ ಐದಾರು ಕಿಮೀ ವ್ಯಾಪ್ತಿಯ ಕನಿಷ್ಠ 5ರಿಂದ ಗರಿಷ್ಠ 10 ಶಾಲೆಗಳ ವಿಲೀನಕ್ಕೆ ಸದ್ದಿಲ್ಲದೆ ಪ್ರಕ್ರಿಯೆ ಆರಂಭವಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಇದರಿಂದ ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ಕನಿಷ್ಠ 5 ಸಾವಿರದಿಂದ ಗರಿಷ್ಠ 7 ಸಾವಿರ ಸರ್ಕಾರಿ ಶಾಲೆಗಳು ಈ ಕೆಪಿಎಸ್‌ ಶಾಲೆಗಳಲ್ಲಿ ವಿಲೀನವಾಗಲಿವೆ ಎನ್ನಲಾಗುತ್ತಿದೆ.


Share with

Leave a Reply

Your email address will not be published. Required fields are marked *