ಪುತ್ತೂರು: ಗೋಣಿ ಚೀಲದಲ್ಲಿಟ್ಟ ಅಡಿಕೆ ಕಳವಾದ ಘಟನೆ ಶಾಂತಿಗೋಡು ಗ್ರಾಮದ ವೀರಮಂಗಲದಲ್ಲಿ ನಡೆದ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಂತಿಗೋಡು ಗ್ರಾಮದ ವೀರಮಂಗಲ ಅಚ್ಯುತ ಗೌಡ ಅವರ ಮನೆಯ ಕೊಟ್ಟಿಗೆಯಿಂದ 16 ಗೋಣಿ ಚೀಲ ಅಡಿಕೆ ಕಳವಾಗಿದೆ. ಅವರು ಒಟ್ಟು 36 ಗೋಣಿ ಚೀಲಗಳಲ್ಲಿ ಒಣಗಿಸಿದ ಅಡಿಕೆಯನ್ನು ಕೊಟ್ಟಿಗೆಯ ಅಟ್ಟದಲ್ಲಿ ಇರಿಸಿದ್ದರು. ಬಳಿಕದ ದಿನದಲ್ಲಿ ಅವರ ಮಗಳ ಮದುವೆ ನಡೆದಿದ್ದು, ಸಮಾರಂಭವೆಲ್ಲ ಮುಗಿದು ನೋಡಿದಾಗ 16 ಗೋಣಿ ಅಡಿಕೆ ಕಳವಾಗಿರುವುದು ಬೆಳಕಿಗೆ ಬಂದಿದೆ. ಕಳವಾದ ಅಡಿಕೆಯ ಮೌಲ್ಯ 1 ಲಕ್ಷ ರೂ. ಆಗಿರುತ್ತದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.




