’ಗೃಹ ಲಕ್ಷ್ಮಿ’ ಗದ್ದಲ .. ಸದನಕ್ಕೆ ತಪ್ಪು ಮಾಹಿತಿ ನೀಡಿದ ಸಚಿವೆ..! ಮಹಿಳೆಯರಲ್ಲಿ ಕ್ಷಮೆ ಕೇಳಿದ ಹೆಬ್ಬಾಳ್ಕರ್

Share with

ಸುವರ್ಣ ವಿಧಾನಸೌಧ: ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ‘ಗೃಹಲಕ್ಷ್ಮೀ’ ಅಡಿ ಫಲಾನುಭವಿಗಳಿಗೆ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸದನಕ್ಕೆ ತಪ್ಪು ಮಾಹಿತಿ ನೀಡಿದ ಆರೋಪ ವಿಚಾರ ವಿಧಾನಸಭೆಯಲ್ಲಿ ಬುಧವಾರ ಕೋಲಾಹಲ ಎಬ್ಬಿಸಿತು. ಕೊನೆಗೆ ಪ್ರತಿಪಕ್ಷಗಳ ಪಟ್ಟಿಗೆ ಮಣಿದ ಸಚಿವೆ, ಸದನದ ಕ್ಷಮೆ ಕೇಳಿದ ಪ್ರಸಂಗ ನಡೆಯಿತು.

ಗೃಹ ಲಕ್ಷ್ಮೀ ಯೋಜನೆ ಅಡಿ ಕಳೆದ ಆಗಸ್ಟ್‌ವರೆಗೆ 1.26 ಕೋಟಿ ಮಹಿಳೆಯರಿಗೆ ಒಟ್ಟು 23 ಕಂತುಗಳ 46,000 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದೆಲ್ಲವೂ ಪಾವತಿ ಆಗಿದೆ ಎಂಬ ಭಾವನೆ ನನ್ನದಾಗಿತ್ತು. ಆದರೆ, ಅದರಲ್ಲಿ ಸ್ವಲ್ಪ ಹೆಚ್ಚು-ಕಡಿಮೆ ಆಗಿದೆ ಎಂಬ ಮಾಹಿತಿ ಬಂತು. ಸದನಕ್ಕೆ ತಪ್ಪು ಮಾಹಿತಿ ನೀಡುವ ಯಾವುದೇ ಉದ್ದೇಶ ಇರಲಿಲ್ಲ. ಇದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ’ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

ಸಚಿವೆ ಕ್ಷಮೆ ಕೇಳಿದ ನಂತರವೂ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ‘ಬಿಟ್ಟುಹೋದ 2 ಕಂತುಗಳ ಹಣವನ್ನು ಫಲಾನುಭವಿಗಳಿಗೆ ಯಾವಾಗ ಪಾವತಿಸಲಾಗುವುದು ಎಂಬುದನ್ನು ಎಲ್ಲಿಯೂ ಸಚಿವರು ಸ್ಪಷ್ಟಪಡಿಸಲಿಲ್ಲ. ಒಟ್ಟಾರೆಯಾಗಿ ಸಚಿವರ ಉತ್ತರ ಸಮಾಧಾನಕರ ಆಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು.

ಸದನಕ್ಕೆ ಅಗೌರವ:

ಇದಕ್ಕೂ ಮುನ್ನ ಕಲಾಪ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಆ‌ರ್. ಅಶೋಕ್, ‘ಎರಡು ತಿಂಗಳು ಹಣ ಬಿಡುಗಡೆ ಆಗಿಲ್ಲದಿದ್ದರೂ, ಹಣ ಪಾವತಿಯಾಗಿದೆ ಎಂದು ಹೇಳಿಕೆ ನೀಡುವ ಮೂಲಕ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಅವರ ಹೇಳಿಕೆಯನ್ನು ಸಭಾಧ್ಯಕ್ಷರೂ ಪುನರುಚ್ಛರಿಸಿದ್ದಾರೆ. ಇದರೊಂದಿಗೆ ಸದನಕ್ಕೆ ಅಗೌರವ ಸೂಚಿಸಿದ್ದಾರೆ’ ಎಂದು ಆರೋಪಿಸಿದರು.

ಈ ಬಗ್ಗೆ ಕಳೆದ ಮೂರು ದಿನಗಳಿಂದ ಒತ್ತಾಯಿಸುತ್ತಿದ್ದರೂ ಸಚಿವರು ಸದನಕ್ಕೂ ಬಂದಿಲ್ಲ. ತಾವು ನೀಡಿದ ಮಾಹಿತಿ ಸರಿಯೋ ತಪ್ಪೋ ಎಂಬುದಕ್ಕೆ ಸ್ಪಷ್ಟನೆಯನ್ನೂ ನೀಡಿಲ್ಲ. ಆದ್ದರಿಂದ ಕೂಡಲೇ ಸದನಕ್ಕೆ ಬರಬೇಕು. ಅವರ ಮಾಹಿತಿ ತಪ್ಪಾಗಿದ್ದರೆ, ರಾಜ್ಯದ ಎಲ್ಲ ಮಹಿಳೆಯರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಪತಿಪಕ್ಷಗಳ ಉಳಿದೆಲ್ಲ ಸದಸ್ಯರು ಅದಕ್ಕೆ ದನಿಗೂಡಿಸಿದರು.

ಈ ವೇಳೆ ಆಡಳಿತ ಪಕ್ಷದ ಸದಸ್ಯರು ಸಮಜಾಯಿಷಿ ನೀಡಲು ಮುಂದಾದರು. ಆದರೆ, ಇದಕ್ಕೆ ಮಣಿಯದ ಪ್ರತಿಪಕ್ಷಗಳು ಸಚಿವರು ಸದನಕ್ಕೆ ಬರಲೇಬೇಕು ಎಂದು ಪಟ್ಟುಹಿಡಿದರು. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಇದರಿಂದ ಗೊಂದಲ ಉಂಟಾಯಿತು. ಪರಿಣಾಮ ಸ್ಪೀಕ‌ರ್ ಯು.ಟಿ. ಖಾದರ್, ಕೆಲಹೊತ್ತು ಸದನವನ್ನು ಮುಂದೂಡಿದರು.

ವಿಷಾದ ಹೇಳಿದ ಲಕ್ಷ್ಮೀ, ಪಟ್ಟುಬಿಡದ ವಿಪಕ್ಷ:

ಕಲಾಪ ಪುನಾರಂಭವಾಗುತ್ತಿದ್ದಂತೆ ಸದನದಲ್ಲಿ ಪ್ರತ್ಯಕ್ಷರಾದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ‘ಯೋಜನೆ ಆರಂಭವಾದ ನಂತರದಿಂದ ಆಗಸ್ಟ್‌ವರೆಗೆ ರಾಜ್ಯದ 1.26 ಕೋಟಿ ಮಹಿಳೆಯರಿಗೆ 23 ಕಂತುಗಳಲ್ಲಿ ಒಟ್ಟು 46 ಸಾವಿರ ಕೋಟಿ ರೂ. ಪಾವತಿಸಲಾಗಿದೆ ಎಂದು ನಾನು ಹೇಳಿದ್ದೆ. ಇದೆಲ್ಲವೂ ನೇರ ನಗದು ವರ್ಗಾವಣೆ ಮೂಲಕ ಕ್ಲಿಯರ್ ಆಗಿದೆ (ಪಾವತಿ ಆಗಿದೆ) ಎಂಬುದು ನನ್ನ ಭಾವನೆ ಆಗಿತ್ತು. ಆದರೆ, ನಂತರದಲ್ಲಿ ಈ ಪಾವತಿಯಲ್ಲಿ ತುಸು ಹೆಚ್ಚು-ಕಡಿಮೆ ಆಗಿದೆ ಎಂಬ ಮಾಹಿತಿ ಬಂದಿತು. ಆ ಹೆಚ್ಚು-ಕಡಿಮೆಯಾದ ಹಣವನ್ನು ಬೇರೆ ಕಡೆ ‘ಡೈವರ್ಟ್’ (ವರ್ಗಾಯಿಸಲಾಗಿದೆ) ಮಾಡಲಾಗಿದೆ ಎಂಬುದು ಗೊತ್ತಾಯಿತು. ಅದು ಯಾಕೆ ಹೀಗೆ ಆಯಿತು ಎಂಬುದನ್ನು ಹಣಕಾಸು ಸಚಿವರೂ ಆಗಿರುವ ಸಿಎಂ ಜತೆ ಚರ್ಚಿಸುತ್ತೇನೆ. ಈ ಎಲ್ಲದರ ನಡುವೆ ನನ್ನ ಹೇಳಿಕೆಯಿಂದ ಯಾರಿಗಾದರೂ ಬೇಸರ ಅಥವಾ ನೋವಾಗಿದ್ದರೆ ವಿಷಾದಿಸುತ್ತೇನೆ’ ಎಂದರು.

ಇದಕ್ಕೆ ಒಪ್ಪದ ಪ್ರತಿಪಕ್ಷದ ಆರ್. ಅಶೋಕ್, ಎಸ್.ಸುರೇಶ್ ಕುಮಾರ್, ಅರವಿಂದ ಬೆಲ್ಲದ ಮತ್ತಿತರರು, ‘ಪಾವತಿ ಆಗದಿರುವ ಹಣವನ್ನು ಪಾವತಿ ಮಾಡಲಾಗಿದೆ ಎಂಬ ಹೇಳಿಕೆಯು ಸದನಕ್ಕೆ ಮಾತ್ರವಲ್ಲ, ರಾಜ್ಯದ ಮಹಿಳೆಯರಿಗೆ ಸೂಚಿಸಿದ ಅಗೌರವ ಮತ್ತು ಅಪಮಾನ. ಹಾಗಾಗಿ, ಅವರ ಕ್ಷಮೆ ಕೇಳಬೇಕು ಮತ್ತು ಬಾಕಿ ಹಣ ಯಾವಾಗ ಪಾವತಿ ಆಗುತ್ತದೆ ಎಂಬುದನ್ನು ಹೇಳಬೇಕು’ ಎಂದು ಪಟ್ಟುಹಿಡಿದರು.

ಈ ಸಂದರ್ಭದಲ್ಲಿ ಬಿಜೆಪಿಯ ವಿ.ಸುನೀಲ್ ಕುಮಾರ್, ‘ಕೊಡಲು ಆಗುವುದಿಲ್ಲ ಎಂದಾದರೆ, ಸರ್ಕಾರ ದಿವಾಳಿ ಆಗಿದೆ. ಕೊಡಲು ಆಗುತ್ತಿಲ್ಲ ಎಂದಾದರೂ ಹೇಳಲಿ’ ಎಂದು ಟೀಕಿಸಿದರು.

‘ದಿವಾಳಿ’ ಹೇಳಿಕೆಗೆ ಡಿಕೆಶಿ ತಿರುಗೇಟು:

ಇದಕ್ಕೆ ತಿರುಗೇಟು ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ‘ಭದ್ರಾ ಮೇಲ್ದಂಡೆಗೆ ಕೇಂದ್ರ ಸರ್ಕಾರ 5,300 ಕೋಟಿ ರೂ. ಘೋಷಿಸಿತ್ತು. ಅದನ್ನು ಈವರೆಗೆ ಕೊಟ್ಟಿಲ್ಲ. ನರೇಗಾ ಯೋಜನೆ ಅಡಿ 39,000 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಹಾಗಿದ್ದರೆ, ಕೇಂದ್ರ ಸರ್ಕಾರ ದಿವಾಳಿ ಆಗಿದೆ ಎಂದು ಹೇಳಲಾಗುತ್ತಾ?’ ಎಂದು ಕೇಳಿದರು.

ಸಚಿವರಾದ ಎಚ್‌.ಕೆ.ಪಾಟೀಲ್, ಪ್ರಿಯಾಂಕ್ ಖರ್ಗೆ, ಡಾ.ಶರಣಪ್ರಕಾಶ ಪಾಟೀಲ ಮತ್ತಿತರರು ದನಿಗೂಡಿಸಿದರು. ಕೊನೆಗೆ ಲಕ್ಷ್ಮೀ ಹೆಬ್ಬಾಳ್ಳರ್‌, ‘ಗೃಹ ಲಕ್ಷ್ಮೀ ಯೋಜನೆಯು ರಾಜ್ಯದ ಮಹಿಳೆಯರ ಸ್ವಾಭಿಮಾನ, ಆತ್ಮಸ್ಥೆರ್ಯ ಹೆಚ್ಚಿಸುತ್ತಿದೆ. ಅದರಡಿ ನಿಯಮಿತವಾಗಿ ಹಣ ಪಾವತಿಸಲಾಗುತ್ತಿದೆ. ಇದರಲ್ಲಿ ತುಸು ಹೆಚ್ಚು-ಕಡಿಮೆ ಆಗಿದ್ದರಿಂದ ಸದನದ ಪ್ರತಿಪಕ್ಷದ ಎಲ್ಲ ಸದಸ್ಯರಿಗೆ ವಿಷಾದ ವ್ಯಕ್ತಪಡಿಸಿದ್ದೇನೆ. ‘ವಿಷಾದ’ ಪದ ಇಷ್ಟ ಆಗಿಲ್ಲ ಎಂದಾದರೆ, ಕ್ಷಮೆಯನ್ನೂ ಕೇಳುತ್ತೇನೆ’ ಎಂದು ಹೇಳಿದರು.

ಮಹಿಳೆ ಕಾರಣಕ್ಕೆ ಟಾರ್ಗೆಟ್

ಇದೆಲ್ಲದರ ಹೊರತಾಗಿ ಓರ್ವ ಮಹಿಳೆ ಎಂಬ ಕಾರಣಕ್ಕೆ ನೀವೆಲ್ಲ ಈ ರೀತಿ ಮುಗಿಬೀಳುತ್ತಿರುವುದು ಸರಿಯಲ್ಲ. – ಲಕ್ಷ್ಮೀ ಹೆಬ್ಬಾಳ್ಳ‌ರ್, ಸಚಿವೆ

ವಿಪಕ್ಷವನ್ನು ಕೆರಳಿಸಿದ ‘ಮಹಿಳೆ’ ಮಾತು!

ಇದೆಲ್ಲದರ ಹೊರತಾಗಿ ಓರ್ವ ಮಹಿಳೆ ಎಂಬ ಕಾರಣಕ್ಕೆ ನೀವೆಲ್ಲ ಈ ರೀತಿ ಮುಗಿಬೀಳುತ್ತಿರುವುದು ಸರಿಯಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಡಿದ ಮಾತು, ಪ್ರತಿಪಕ್ಷದ ಸದಸ್ಯರನ್ನು ಮತ್ತೆ ಕೆರಳಿಸಿತು. ಅವರು ಈ ರಾಜ್ಯದ ಸಚಿವರಾಗಿದ್ದು, ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಅವರು ತಪ್ಪು ಹೇಳಿಕೆ ನೀಡಿದ್ದಾರೆ ಎಂದು ಕ್ಷಮೆಯಾಚಿಸಲು ಒತ್ತಾಯಿಸಿದ್ದೇವೆಯೇ ಹೊರತು, ಮಹಿಳೆ ಎಂದಲ್ಲ ಎಂದು ತಿಳಿಸಿದರು. ಆಗ ಸ್ಪೀಕರ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಅಂತಿಮವಾಗಿ ಬಾಕಿ ಹಣ ಯಾವಾಗ ಪಾವತಿ ಆಗಲಿದೆ. ಎಂಬುದರ ಬಗ್ಗೆ ಸಚಿವರು ಸ್ಪಷ್ಟಪಡಿಸಿಲ್ಲ ಎಂದು ಆರೋಪಿಸಿ ಪ್ರತಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು.

ಮಹಿಳೆಯರ ಬಳಿ ಕ್ಷಮೆ ಕೇಳಬೇಕು

ಹಣ ಬಿಡುಗಡೆಯಾಗಿಲ್ಲ. ಈ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ. ರಾಜ್ಯ ಎಲ್ಲ ಮಹಿಳೆಯರ ಕ್ಷಮೆ ಕೇಳಬೇಕು. 2 ತಿಂಗಳ ಕಂತು ಬಿಡುಗಡೆ ಮಾಡಬೇಕು–ಆರ್.ಅಶೋಕ್, ವಿಪಕ್ಷ ನಾಯಕ


Share with

Leave a Reply

Your email address will not be published. Required fields are marked *