ಉಡುಪಿ: ಕರಾವಳಿ ಜಿಲ್ಲೆಗಳ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ದಟ್ಟಣೆ ವಿಪರೀತವಾಗುತ್ತಿದ್ದು, ದಿನನಿತ್ಯ ಸರಣಿ ಅಪಘಾತಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಕೇರಳದ ಗಡಿ ತಲಪಾಡಿಯಿಂದ ಬೈಂದೂರು ಮೂಲಕ ಕಾರವಾರದವರೆಗೆ ರೈಲ್ವೇ ಹಳಿಗಳ ಸನಿಹ ಹೊಸ ಎಕ್ಸ್ಪ್ರೆಸ್ ಹೈವೇ ರಚಿಸಬೇಕೆಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಲೋಕಸಭೆ ಅಧಿವೇಶನದಲ್ಲಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಎಕ್ಸ್ಪ್ರೆಸ್ ಹೈವೇ ನಿರ್ಮಾಣದಿಂದ ಕರಾವಳಿಯ ಪ್ರವಾಸೋದ್ಯಮಕ್ಕೆ ಹೆಚ್ಚು ಅವಕಾಶವಾಗಲಿದ್ದು ಮಂಗಳೂರಿನಿಂದ ಗೋವಾದವರೆಗೆ ಕರಾವಳಿ ಕರ್ನಾಟಕ ಅಭಿವೃದ್ಧಿಯ ಹೊಸ ಶಖೆ ಪ್ರಾರಂಭವಾಗಲಿದೆ ಎಂದವರು ಉಲ್ಲೇಖಿಸಿದ್ದಾರೆ. ಜತೆಗೆ ಕುಂದಾಪುರ, ಕೋಟೇಶ್ವರ, ಹಾಲಾಡಿ, ಸೋಮೇಶ್ವರ, ಆಗುಂಬೆ, ಶೃಂಗೇರಿ ತಲಪುವ 88 ಕಿ.ಮೀ ರಸ್ತೆಯನ್ನು ರಾ.ಹೆ. ಆಗಿ ಘೋಷಿಸಿ ಅಭಿವೃದ್ಧಿಪಡಿಸಲು ಮನವಿ ಮಾಡಿದ್ದಾರೆ.
ಆಗುಂಬೆ (ಎನ್. ಎಚ್. 169ಎ) ಶೃಂಗೇರಿ, ಅಗಲಗುಂಡಿ, ಬಾಳೆಹೊನ್ನೂರು, ಹೈರಂಬಿ, ಆಲ್ಲೂರು, ನದಿಪುರ, ಚಿಕ್ಕಮಗಳೂರು ಸಂಪರ್ಕದ ಸರಿ ಸುಮಾರು 120 ಕಿ.ಮೀ ಪಿ.ಡಬ್ಲ್ಯೂ.ಡಿ ರಸ್ತೆಯನ್ನು ಮೇಲ್ದರ್ಜೆಗೇರಿಸಿ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಿ ಅಭಿವೃದ್ಧಿ ಮಾಡಬೇಕು. ಇದರಿಂದ ಶೃಂಗೇರಿಯಂತಹ ಧಾರ್ಮಿಕ ಕೇಂದ್ರಗಳಿಗೆ ಬರುವ ಭಕ್ತರ ಹಾಗೂ ಕೃಷಿ ಪ್ರದೇಶದಲ್ಲಿ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗಲಿದೆ ಎಂದವರು ಮನವಿಯಲ್ಲಿ ತಿಳಿಸಿದ್ದಾರೆ.




