ಪಾವಗಡ: ಕಾರು ಬಸ್ಸು ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪಾವಗಡ ಪಟ್ಟಣದ ಹೊರವಲಯದ ಕಡಮಲಕುಂಟೆಕೈಗಾರಿಕಾ ಪ್ರದೇಶದ ಬಳಿ ಸಂಭವಿಸಿದೆ.

ಇಂದು(ಡಿ.20) ಬೆಳಿಗ್ಗೆ ಪಾವಗಡ ಪಟ್ಟಣದಿಂದ ಅಂಧ್ರದ ಪೆನುಕೊಂಡದ ಕಡೆಗೆ ಹೋಗುತ್ತಿದ್ದ ಇನೋವಾ ಕಾರು ಮತ್ತು ಪೆನುಕೊಂಡದಿಂದ ಪಾವಗಡಗೆ ಬರುತ್ತಿದ್ದ ಎ.ಪಿ.ಎಸ್.ಆರ್.ಟಿ.ಸಿ ಬಸ್ ಎ.ಪಿ.39ಯು.ಎಮ್. 6036 ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು. ಅಪಘಾತದ ತೀವ್ರತೆಗೆ ಬಸ್ ರಸ್ತೆ ಬದಿಯ ಹಳ್ಳಕ್ಕೆ ನುಗ್ಗಿದ್ದು ಕಾರು ನಜ್ಜುಗುಜ್ಜಾಗಿದೆ.
ಅಪಘಾತದಲ್ಲಿ ಮಾಜಿ ಪುರಸಭೆ ಅಧ್ಯಕ್ಷ ಸುದೇಶ್ ಬಾಬು ಅವರ ಇನ್ನೋವಾ ಕಾರಿನ ಚಾಲಕ, ಐವಾರ್ಲಹಳ್ಳಿ ಗ್ರಾಮದ ನಿವಾಸಿಚಂದ್ರಶೇಖರ್ ರೆಡ್ಡಿ (38) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಇನೋವಾದಲ್ಲಿ ಚಾಲಕು ಒಬ್ಬರೇ ಇದ್ದರು,ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣ ಪಾವಗಡ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ಬೆಳಗಿನ ಸಮಯದಲ್ಲಿ ದಟ್ಟವಾದ ಮಂಜು ಕಾರಣ ಎಂದು ತಿಳಿದು ಬಂದಿದೆ.
ಅಪಘಾತದ ಮಾಹಿತಿ ತಿಳಿದ ಕೂಡಲೇ ಪಾವಗಡ ಪೊಲೀಸ್ ಠಾಣೆಯ ಸಿಐ ಸುರೇಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




