ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆಶ್ರಮ ಸ್ವೀಕಾರ, ಪೀಠಾ ರೋಹಣದ ಸುವರ್ಣ ಮಹೋತ್ಸವದ ನಿಮಿತ್ತ, ಭಕ್ತರ ಸಹಕಾರ ದೊಂದಿಗೆ ಉಡುಪಿ ಶ್ರೀಕೃಷ್ಣನಿಗೆ ಸಮರ್ಪಿಸಲ್ಪಡುವ ಸ್ವರ್ಣ ಪಾರ್ಥಸಾರಥಿ ರಥಕ್ಕೆ ಚಿನ್ನದ ಹೊದಿಕೆ ಜೋಡಿಸುವ ಪ್ರಕ್ರಿಯೆಗೆ ಪರ್ಯಾಯ ಶ್ರೀಪಾದರು ಕಿರಿಯ ಶ್ರೀಪಾದರಾದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರ ಜತೆಗೂಡಿ ಚಾಲನೆ ನೀಡಿದರು. ಶ್ರೀಮಠದ ದಿವಾನರಾದ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಮುರಳೀಧರ ಆಚಾರ್ಯ, ಖ್ಯಾತ ಕಲಾವಿದ ಗಂಜೀಫಾ ರಘುಪತಿ ಭಟ್ ಉಪಸ್ಥಿತರಿದ್ದರು. ಈ ಸ್ವರ್ಣ ರಥವು ಡಿ.27ರಂದು ಶ್ರೀಕೃಷ್ಣನಿಗೆ ಸಮರ್ಪಿಸಲ್ಪಡಲಿದೆ.

ಡಿ.21: ಚತುಷ್ಪವಿತ್ರ ನಾಗಮಂಡಲೋತ್ಸವ
ಶ್ರೀ ಕೃಷ್ಣ ಮಠದಲ್ಲಿ ಭಾವಿಸಮೀರ ಶ್ರೀ ವಾದಿರಾಜ ಗುರುಸಾರ್ವಭೌಮ ಪ್ರತಿಷ್ಠಿತ ಸುಬ್ರಹ್ಮಣ್ಯ ಗುಡಿಯಲ್ಲಿ ಡಿ.21ರಂದು ಚತುಷ್ಪವಿತ್ರ ನಾಗಮಂಡಲೋತ್ಸವವು ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನಡೆಯಲಿದೆ. ಆ ಪ್ರಯುಕ್ತ ಸನ್ನಿಧಿಯಲ್ಲಿ ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಂಜೆ 6.30ರಿಂದ ಸುಬ್ರಹ್ಮಣ್ಯ ಗುಡಿಯ ಎದುರು ಸಗ್ರಿ ಗೋಪಾಲಕೃಷ್ಣ ಸಾಮಗ (ನಾಗ ಪಾತ್ರಿಗಳು) ಹಾಗೂ ಮುದ್ದೂರು ಕೃಷ್ಣ ಪ್ರಸಾದ ವೈದ್ಯ ಹಾಗೂ ಬಳಗದವರಿಂದ ಹಾಲಿಟ್ಟು ಸೇವೆ, ರಾತ್ರಿ 9ರಿಂದ ನಾಗಮಂಡಲೋತ್ಸವ ನಡೆಯಲಿದೆ ಎಂದು ಶ್ರೀ ಮಠದ ಪ್ರಕಟನೆ ತಿಳಿಸಿದೆ.




