ತಮಿಳು ಚಿತ್ರರಂಗದಲ್ಲಿ ರಾಜಕೀಯ: ವಿಜಯ್ ಕೊನೆ ಸಿನಿಮಾ ಟಾರ್ಗೆಟ್

Share with

ತಮಿಳುನಾಡಿನಲ್ಲಿ ಚಿತ್ರರಂಗಕ್ಕೂ (Movie) ರಾಜಕೀಯಕ್ಕೂ ಬಹಳ ಆಪ್ತ ಬಂಧ. ಸ್ವಾತಂತ್ರ್ಯ ಬಂದಾಗಿನಿಂದಲೂ ತಮಿಳು ಚಿತ್ರರಂಗದಲ್ಲಿರುವವರೇ ತಮಿಳುನಾಡಿನ ರಾಜಕೀಯದಲ್ಲೂ ಅಬ್ಬರಿಸಿದ್ದಾರೆ. ಅಣ್ಣಾದೊರೈ, ಶಿವಾಜಿ ಗಣೇಶನ್, ಕರುಣಾನಿಧಿ, ಎಂಜಿಆರ್, ಜಯಲಲಿತಾ, ವಿಜಯ್ಕಾಂತ್, ಶರತ್ಕುಮಾರ್ ಇನ್ನೂ ಹಲವಾರು ಮಂದಿ ಸಿನಿಮಾ ಸೆಲೆಬ್ರಿಟಿಗಳು ತಮಿಳುನಾಡು ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ. ಈಗಲೂ ಸಹ ಈ ಪದ್ಧತಿ ಚಾಲ್ತಿಯಲ್ಲಿದ್ದು, ಇತ್ತೀಚೆಗಷ್ಟೆ ನಟ ದಳಪತಿ ವಿಜಯ್ ಅವರು ರಾಜಕೀಯಕ್ಕೆ ಕಾಲಿರಿಸಿದ್ದಾರೆ. ಆದರೆ ತಮಿಳುನಾಡಿನಲ್ಲಿ ಅರ್ಧ ಶತಮಾನದಿಂದಲೂ ಸಿನಿಮಾಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ರೂಢಿ ಇದೆ, ಈಗಲೂ ಅದೇ ನಡೆಯುತ್ತಿದೆ.

ವಿಜಯ್ ಅವರು ತಮ್ಮ ಕೊನೆಯ ಸಿನಿಮಾ ‘ಜನ ನಾಯಗನ್’ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ. ಸಿನಿಮಾ ಜನವರಿ 09 ರಂದು ಬಿಡುಗಡೆ ಆಗಲಿದೆ. ಈ ಸಿನಿಮಾ ಅನ್ನು ತಮ್ಮ ರಾಜಕೀಯ ಪಯಣಕ್ಕೆ ಚಿಮ್ಮುಹಲಗೆಯಾಗಿ ವಿಜಯ್ ಬಳಸಲಿದ್ದಾರೆ. ತಾವೆಂಥಹ ಜನನಾಯಕ ಎಂಬುದನ್ನು ಹೇಳಲೆಂದೇ ಈ ಸಿನಿಮಾ ಮಾಡಿದ್ದಾರೆ. ಆದರೆ ಇದೀಗ ವಿಜಯ್ ಅವರ ಈ ಸಿನಿಮಾ ರಾಜಕೀಯಕ್ಕೆ ಸಿನಿಮಾದ ಮೂಲಕವೇ ಉತ್ತರ ನೀಡಲು ಎದುರಾಳಿಗಳು ಸಜ್ಜಾಗಿದ್ದಾರೆ.

ತಮಿಳಿನ ಮತ್ತೊಬ್ಬ ಜನಪ್ರಿಯ ನಟ ಶಿವಕಾರ್ತಿಕೇಯನ್ ನಟನೆಯ ‘ಪರಾಶಕ್ತಿ’ ಸಿನಿಮಾ ಜನವರಿ 14ರಂದು ಬಿಡುಗಡೆ ಆಗಬೇಕಿತ್ತು. ಆದರೆ ವಿಜಯ್ ಅವರ ‘ಜನ ನಾಯಗನ್’ಗೆ ಪೆಟ್ಟು ಕೊಡಬೇಕೆಂದು, ಜನವರಿ 10ರಂದೇ ಸಿನಿಮಾ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಆಕಾಶ್ ಭಾಸ್ಕರನ್ ಘೋಷಿಸಿದ್ದಾರೆ. ಅಂದಹಾಗೆ ಆಕಾಶ್ ಅವರು ಡಿಎಂಕೆ ಪಕ್ಷದ ಪ್ರಮುಖ ನಾಯಕರ ನಿಕಟ ಸಂಬಂಧಿ ಆಗಿದ್ದಾರೆ.

‘ಜನ ನಾಯಗನ್’ ರೀತಿ ‘ಪರಾಶಕ್ತಿ’ ಸಿನಿಮಾ ಸಹ ರಾಜಕೀಯ ವಿಷಯವನ್ನು ಹೊಂದಿರುವ ಸಿನಿಮಾ ಆಗಿದೆ. 1952 ಬಿಡುಗಡೆ ಆಗಿದ್ದ ‘ಪರಾಶಕ್ತಿ’ ಸಿನಿಮಾ ತಮಿಳುನಾಡು ರಾಜಕೀಯದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿತ್ತು, ಸಾಮಾಜಿಕ ಕ್ರಾಂತಿಗೆ ಕಾರಣವಾಗಿತ್ತು. ಇದೀಗ ಈ ಸಿನಿಮಾಕ್ಕೂ ‘ಪರಾಶಕ್ತಿ’ ಎಂದೇ ಹೆಸರಿಟ್ಟು, ಹಿಂದಿ ಹೇರಿಕೆ, ಜಾತಿ ಪದ್ಧತಿ ಇತರೆ ರಾಜಕೀಯ ವಿಷಯಗಳನ್ನು ಸಿನಿಮಾನಲ್ಲಿ ಅಳವಡಿಸಲಾಗಿದೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಇದೀಗ ಈ ಸಿನಿಮಾವನ್ನು ವಿಜಯ್ ಅವರ ಸಿನಿಮಾದ ಜೊತೆಗೆ ಬಿಡುಗಡೆ ಮಾಡಲಾಗುತ್ತಿದ್ದು, ವಿಜಯ್ ಅವರಿಗೆ ಸ್ಪರ್ಧೆ ನೀಡಲಾಗುತ್ತಿದೆ.

ಅದಾದ ಒಂದೇ ವಾರಕ್ಕೆ ಅಜಿತ್ ನಟನೆಯ ಹಳೆಯ ಹಿಟ್ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗುತ್ತಿದ್ದು, ಒಟ್ಟಾರೆ ವಿಜಯ್ ಅವರ ಸಿನಿಮಾಕ್ಕೆ ಹೆಚ್ಚು ಚಿತ್ರಮಂದಿರಗಳು ಸಿಗದಂತೆ, ಹೆಚ್ಚು ಜನರ ಅಟೆನ್ಷನ್ ಸಿಗದಂತೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ತಮಿಳುನಾಡು ಚಿತ್ರರಂಗದಲ್ಲಿ ಮತ್ತೊಮ್ಮೆ ಸಿನಿಮಾ ರಾಜಕೀಯ ಶುರುವಾಗಿದೆ. ಗೆಲುವು ಯಾರಿಗೆ ಆಗುತ್ತದೆ ನೋಡಬೇಕಿದೆ.


Share with

Leave a Reply

Your email address will not be published. Required fields are marked *