ಬೆಂಗಳೂರು: ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ದಿನಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸರ್ಕಾರದ ಮುಖ್ಯಕಾರ್ಯದರ್ಶಿಗೆ ಪತ್ರದ ಮೂಲಕ ಒತ್ತಾಯಿಸಿದೆ.

ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರಿಗೆ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ ಅವರು ಪತ್ರದ ಮೂಲಕ ಮನವಿ ಮಾಡಿದ್ದಾರೆ. ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಯುಗದಲ್ಲಿ ಮಕ್ಕಳು ಇಂಟರ್ನೆಟ್ ಶಿಕ್ಷಣ, ಮನರಂಜನೆ ಮತ್ತು ಸಾಮಾಜಿಕ ಜಾಲತಾಣಗಳಿಗೆ ಹೆಚ್ಚಿನ ಸಮಯಾವಕಾಶ ನೀಡುತ್ತಿದ್ದಾರೆ. ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ಜ್ಞಾಪಕ ಶಕ್ತಿಯ ಕೊರತೆ, ಶ್ರವಣದೋಷ ಮತ್ತು ದೈಹಿಕ ಚಟುವಟಿಕೆಗಳಲ್ಲಿ ಆಸಕ್ತಿ ಕೊರತೆಯ ಲಕ್ಷಣಗಳು ಕಂಡು ಬರುತ್ತಿವೆ.
ಹಾಗಾಗಿ ಮಕ್ಕಳು ಶಾಲೆಗಳಲ್ಲಿ ಕನಿಷ್ಠ 10 ರಿಂದ 15 ನಿಮಿಷ ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಂಡಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಸಿದ್ಧತೆ, ಪ್ರಚಲಿತ ವಿದ್ಯಮಾನಗಳ ಸಾಮಾನ್ಯ ಜ್ಞಾನ ವೃದ್ಧಿಸಿಕೊಳ್ಳಲು ಮತ್ತು ಶಬ್ದಕೋಶ, ಭಾಷಾ ಶೈಲಿ ಮತ್ತು ಬರವಣಿಗೆಯ ಕೌಶಲ್ಯಗಳನ್ನು ಸುಧಾರಿಸಲು ಸಹಕಾರಿಯಾಗಲಿದೆ.
ಉತ್ತರ ಪ್ರದೇಶ ಸರ್ಕಾರ ನಿತ್ಯವೂ ಶಾಲೆಗಳಲ್ಲಿ ಮಕ್ಕಳು ಕಡ್ಡಾಯವಾಗಿ ದಿನಪತ್ರಿಕೆಗಳನ್ನು ಓದಲೇಬೇಕೆಂದು ಈಗಾಗಲೇ ಆದೇಶ ಜಾರಿಗೊಳಿಸಿದೆ. ಅದರಂತೆ ಕರ್ನಾಟಕದಲ್ಲಿಯೂ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಮತ್ತು ಸರ್ಕಾರದ ವಿವಿಧ ಇಲಾಖೆಗಳಿಂದ ನಡೆಯುತ್ತಿರುವ ವಸತಿ ಶಾಲೆ, ನಿಲಯಗಳು, ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ದಿನಪತ್ರಿಕೆ ಓದುವ ಆದೇಶವನ್ನು ಅನುಷ್ಠಾನಗೊಳಿಸಬೇಕು ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷ ಶಶಿಧರ್ ಕೋಸಂಬೆ ಅವರು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಪತ್ರದಲ್ಲಿ ಏನಿದೆ?
ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಪತ್ರಿಕೆ ಓದು ಕಡ್ಡಾಯವಾಗಲಿ
- ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಕೊರತೆ
- ಶ್ರವಣದೋಷ ಮತ್ತು ದೈಹಿಕ ಚಟುವಟಿಕೆಗಳಲ್ಲಿ ಆಸಕ್ತಿ ಕೊರತೆ ಹೆಚ್ಚು
- ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಬೇಕು
- ಶಾಲೆಗಳಲ್ಲಿ ಕನಿಷ್ಠ 10 ರಿಂದ 15 ನಿಮಿಷ ದಿನಪತ್ರಿಕೆಗಳನ್ನು ಓದಬೇಕು
- ಇದರಿಂದ ಪರೀಕ್ಷೆಗೆ ಸಿದ್ಧತೆ, ಜ್ಞಾನ ವೃದ್ಧಿ, ಭಾಷಾ ಕೌಶಲ್ಯ ವೃದ್ಧಿ




