ಉಡುಪಿ: ಎಕೆಎಂಎಸ್ ಬಸ್ಸು ಮಾಲಕ ಸೈಫ್ ಕೊಲೆಗೆ ಸಂಚು ರೂಪಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಅಕ್ರಂ ಬಂಧನಕ್ಕೆ ಉಡುಪಿ ಮುಂದಾಗಿದ್ದು, ಇಂಟರ್ ಪೋಲ್ ಸಹಾಯದಿಂದ ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.

ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕೊಡವೂರಿನ ಎ.ಕೆ. ಕಾಟೇಜ್ನಲ್ಲಿ ಸೆ.27 ರಂದು ನಡೆದ ಉದ್ಯಮಿ, ಎಕೆಎಂಎಸ್ ಬಸ್ ಮಾಲಕ ಸೈಫ್ ಯಾನೆ ಸೈಫುದ್ದೀನ್ ಆತ್ರಾಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಅಕ್ರಂ ವಿರುದ್ಧಈಗಾಗಲೇ ಲುಕ್ಔಟ್ ನೋಟಿಸ್ ಜಾರಿಗೊಳಿಸಲಾಗಿದೆ.
2016 ರ ಜು.14 ರಂದು ಆತ್ರಾಡಿ ಸಮೀಪದ ಶೇಡಿಗುಡ್ಡೆ ಎಂಬಲ್ಲಿ ನಡೆದ ಕೆಮ್ಮಣ್ಣುವಿನ ಶೇಖ್ ಮಹಮ್ಮದ್ ತಸ್ಲಿಮ್ ಕೊಲೆ ಪ್ರಕರಣದಲ್ಲಿ ಸೈಫ್ ಜತೆ ಅಕ್ರಂ ಕೂಡ ಆರೋಪಿಯಾಗಿದ್ದ. ಆ ಬಳಿಕ ಆತನ ಸಹಚರನಾಗಿ ಗುರುತಿಸಿಕೊಂಡಿದ್ದು, ಸೈಫ್ ವ್ಯವಹಾರದಲ್ಲಿ ಜತೆಯಾಗಿದ್ದ. ಇವರಿಬ್ಬರು ಜತೆಯಾಗಿ ಉದ್ಯಮ ನಡೆಸುತ್ತಿದ್ದರು.
ವ್ಯವಹಾರದಲ್ಲಿ ಪಾಲುದಾರರಾಗಿದ್ದ ಸೈಫ್ ಮತ್ತು ಅಕ್ರಂ ಜತೆಯಾಗಿದ್ದರು. ಬಸ್ಸು ಸಹಿತ ಹೆಚ್ಚಿನ ವ್ಯವಹಾರದಲ್ಲಿ ನಷ್ಟ ಉಂಟಾಗಿತ್ತು. ಇದರಿಂದಾಗಿ ಅಕ್ರಂ ಸೈಫ್ನನ್ನು ಮುಗಿಸುವ ಸಂಚು ರೂಪಿಸುವುದಕ್ಕೆ ಮುಂದಾದ. ಸೈಫ್ ಕೊಲೆಗೆ ಒಂದು ವಾರ ಮೊದಲು ಅಕ್ರಂ ಕೊಲೆಗೆ ಸಂಬಂಧಿಸಿ ಎಲ್ಲ ರೀತಿಯ ಸಂಚು ರೂಪಿಸಿ, ದುಬೈಗೆ ಪರಾರಿಯಾಗಿದ್ದ. ದುಬೈಗೆ ಹೋಗಿ ವಾರಗಳು ಕಳೆಯುತ್ತಿದ್ದಂತೆ ಸೈಫ್ ನನ್ನು ಆತ ಮೊದಲೇ ಸಿದ್ಧಪಡಿಸಿದ್ದ ಯೋಜನೆಯಂತೆ ಇತರ ಆರೋಪಿಗಳು ಕೊಲೆ ಮಾಡಿದ್ದರು.
ಇದೇ ವೇಳೆ ಆರೋಪಿ ಅಕ್ರಂ ಇವರಿಬ್ಬರ ನಡುವಿನ ವ್ಯವಹಾರಕ್ಕೆ ಸಂಬಂಧಿಸಿದ ಸಾಲಗಳನ್ನು ಸೈಫ್ ಹಾಗೂ ಸೈಫ್ನ ಪತ್ನಿ ಹೆಸರಿಗೆ ಹಾಗೂ ಲಾಭದ ವ್ಯವಹಾರವನ್ನು ತನ್ನ ಪಾಲಿಗೆ ಮಾಡಿಸಿದ್ದ. ಸೈಫ್ ಕೊಲೆಯಾದರೆ ನಷ್ಟ ಭರಿಸುವ ಜವಾಬ್ದಾರಿ ವ್ಯವಹಾರದ ಪಾಲುದಾರನಿಗೆ ಬರಬಾರದು ಎನ್ನುವ ಉದ್ದೇಶಕ್ಕೆ ಈ ರೀತಿಯ ಆಲೋಚನೆ ಮಾಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.




