ಬೆಂಗಳೂರು: ನಟ ದರ್ಶನ್ ಆ್ಯಂಡ್ ಗ್ಯಾಂಗ್‌ನಿಂದ ಹತ್ಯೆಗೀಡಾದ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣ ದೊಡ್ಡ ತಿರುವು ಪಡೆದುಕೊಂಡಿದೆ.

ಪ್ರಕರಣ ಸಂಬಂಧ ಕೆಲ ದಿನಗಳಿಂದ ಸೆಷನ್ಸ್ ಕೋರ್ಟ್‌ನಲ್ಲಿ ಸಾಕ್ಷಿಗಳ ವಿಚಾರಣೆ ನಡೆಯುತ್ತಿದ್ದು, ರೇಣುಕಸ್ವಾಮಿ ತಂದೆ-ತಾಯಿಯನ್ನು ಸಾಕ್ಷಿಗಳನ್ನಾಗಿ ಪರಿಗಣಿಸಿ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತಿದೆ. ಆದರೆ, ತಾಯಿ ರತ್ನಪ್ರಭಾ ಇದೀಗ ಪ್ರಾಸಿಕ್ಯೂಷನ್ ವಿರುದ್ಧವೇ ಹೇಳಿಕೆ ನೀಡುತ್ತಿದ್ದಾರೆ. ಈ ಹಿಂದೆ ತನಿಖಾಧಿಕಾರಿ ಮುಂದೆ ನೀಡಿದ್ದ ಹೇಳಿಕೆಗೂ ಈಗಿನ ಹೇಳಿಕೆಗೂ ವ್ಯತ್ಯಾಸವಿದ್ದು, ಮೊಬೈಲ್ ನಂಬರ್ ಬಗ್ಗೆ ಮತ್ತು ಕರೆಗಳ ಬಗ್ಗೆ ದ್ವಂದ್ವ ಹೇಳಿಕೆ ನೀಡಿದ್ದಾರೆ. ಹೀಗಾಗಿ ಪ್ರಾಸಿಕ್ಯೂಷನ್ ಪರ ವಾದ ಮಂಡಿಸುತ್ತಿರುವ ಹಿರಿಯ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್ ಅವರು, ರತ್ನಪ್ರಭಾ ಅವರನ್ನು ಪ್ರತಿಕೂಲ ಸಾಕ್ಷಿಯನ್ನಾಗಿ ಪರಿಗಣಿಸುವಂತೆ ಕೋರಿ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಜ.5ರಂದು ವಿಚಾರಣೆ ನಡೆಯಲಿದೆ.
ಪುತ್ರನ ಮೊಬೈಲ್ ನಂಬರ್ ಗೊತ್ತಿಲ್ಲ:
ರತ್ನಪ್ರಭಾ, 8 ಅಂಶಗಳಲ್ಲಿ ಪ್ರಾಸಿಕ್ಯೂಷನ್ ವಿರುದ್ಧವೇ ವ್ಯತಿರಿಕ್ತ ಹೇಳಿಕೆ ಕೊಟ್ಟಿದ್ದಾರೆ. ಮಗನ ಮೊಬೈಲ್ ಬಗ್ಗೆ ಗೊತ್ತಿಲ್ಲ ಎಂದು ನ್ಯಾಯಾಲಯದಲ್ಲಿ ಹೇಳಿದ್ದಾರೆ. ಈ ಮೊದಲು ತನಿಖಾಧಿಕಾರಿಗಳ ಎದುರು ಪುತ್ರನ ಮೊಬೈಲ್ ನಂಬರ್ ಗೊತ್ತು ಎಂದು ಹೇಳಿದ್ದರು. ಹತ್ಯೆ ದಿನ 2 ಬಾರಿ ಕರೆ ಮಾಡಿದ್ದಾಗಿ ಹೇಳಿದ್ದರು. ಆದರೆ, ಇದೀಗ ಮೊಬೈಲ್ ನಂಬರ್ ಗೊತ್ತಿಲ್ಲ, ಕರೆ ಮಾಡಿಲ್ಲ ಎಂದು ಗೊಂದಲದ ಹೇಳಿಕೆ ನೀಡಿದ್ದಾರೆ.
ಈ ಎಲ್ಲ ಹೇಳಿಕೆಗಳ ಆಧಾರದಲ್ಲಿ ರತ್ನಪ್ರಭಾ ಅವರನ್ನು ಪ್ರತಿಕೂಲ ಸಾಕ್ಷಿಯಾಗಿ ಪರಿಗಣಿಸಲು ಕೋರಲಾಗಿದೆ. ಒಂದು ವೇಳೆ ರೇಣುಕಸ್ವಾಮಿ ತಾಯಿಯನ್ನು ಪ್ರತಿಕೂಲ ಸಾಕ್ಷಿಯನ್ನಾಗಿ ಪರಿಗಣಿಸಿದರೆ ಎಸ್‌ಪಿಪಿ ಪಾಟಿ ಸವಾಲು ಮಾಡಲಿದ್ದಾರೆ.




