ತಿರುವನಂತಪುರಂ: ಶಾಲಾ ಮಕ್ಕಳ ಬೆನ್ನ ಮೇಲಿನ ಭಾರ ಇಳಿಸಲು ಮತ್ತು ತರಗತಿಯಲ್ಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲು ಕೇರಳ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಶಾಲಾ ಬ್ಯಾಗ್‌ಗಳ ತೂಕ ಇಳಿಕೆ ಹಾಗೂ ತರಗತಿಗಳಲ್ಲಿ ಲಾಸ್ಟ್ ಬೆಂಚ್ ಪರಿಕಲ್ಪನೆಯನ್ನು ಹೋಗಲಾಡಿಸುವ ನೂತನ ಶಿಕ್ಷಣ ಸುಧಾರಣಾ ವರದಿಗೆ ರಾಜ್ಯ ಪಠ್ಯಕ್ರಮ ಸುಧಾರಣಾ ಸಮಿತಿಯು ಅನುಮೋದನೆ ನೀಡಿದೆ.

ಏನಿದು ಹೊಸ ಯೋಜನೆ? ಸಾಮಾನ್ಯವಾಗಿ ತರಗತಿಯಲ್ಲಿ ಹಿಂಬದಿಯ ಸಾಲಿನಲ್ಲಿ ಕೂರುವ ಮಕ್ಕಳನ್ನು ‘ಕಲಿಕೆಯಲ್ಲಿ ಹಿಂದುಳಿದವರು’ ಎಂದು ಗುರುತಿಸುವ ಪದ್ಧತಿ ಇದೆ. ಇದನ್ನು ತಪ್ಪಿಸಲು ತರಗತಿಯ ಆಸನ ವ್ಯವಸ್ಥೆಯನ್ನು ಬದಲಾಯಿಸಲಾಗುತ್ತದೆ. ಇನ್ನು ಮುಂದೆ ತರಗತಿಗಳಲ್ಲಿ ಎಲ್ಲ ಮಕ್ಕಳೂ ಶಿಕ್ಷಕರಿಗೆ ಸಮಾನವಾಗಿ ಕಾಣುವಂತೆ ‘ಯು’ ಆಕಾರದ ಅಥವಾ ವೃತ್ತಾಕಾರದ ಆಸನ ವ್ಯವಸ್ಥೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ.
ಈ ಕರಡು ವರದಿಯನ್ನು SCERT ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರು ಜನವರಿ 20ರೊಳಗೆ ತಮ್ಮ ಸಲಹೆಗಳನ್ನು ನೀಡಬಹುದಾಗಿದೆ.
ಸಾರ್ವಜನಿಕರ ಅಭಿಪ್ರಾಯಗಳನ್ನು ಕ್ರೋಢೀಕರಿಸಿದ ನಂತರ, ಮುಂಬರುವ 2026-27ನೇ ಶೈಕ್ಷಣಿಕ ಸಾಲಿನಿಂದಲೇ ಈ ಬದಲಾವಣೆಗಳನ್ನು ಜಾರಿಗೆ ತರಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಈಗಾಗಲೇ ಕೇರಳದ ಕೆಲವು ಜಿಲ್ಲೆಗಳಾದ ಕಣ್ಣೂರು ಮತ್ತು ತ್ರಿಶೂರ್‌ನಲ್ಲಿ ಪ್ರಾಯೋಗಿಕವಾಗಿ ಈ ‘ಯು’ ಆಕಾರದ ಆಸನ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಕ್ಕಳ ಶಾಲಾ ಜೀವನವನ್ನು ಹೆಚ್ಚು ಸಂತಸದಾಯಕ ಮತ್ತು ಒತ್ತಡ ಮುಕ್ತವಾಗಿಸುವುದು ನಮ್ಮ ಉದ್ದೇಶ. ತರಗತಿಯಲ್ಲಿ ಯಾರೂ ಹಿಂದೆ ಉಳಿಯಬಾರದು ಎಂಬುದು ಈ ಸುಧಾರಣೆಯ ಆಶಯ – ವಿ. ಶಿವನ್‌ಕುಟ್ಟಿ, ಕೇರಳ ಶಿಕ್ಷಣ ಸಚಿವ




