ಬೆಳ್ತಂಗಡಿ: ತಾಲೂಕಿನ ಗೇರುಕಟ್ಟೆ ಸಮೀಪದ ನಾಳ ದೇವಸ್ಥಾನಕ್ಕೆ ಧನುಪೂಜೆಗೆ ತೆರಳಿದ್ದ ಓಡಿಲ್ನಾಳ ಸಂಬೋಳ್ಯದ ಬಾಲಕ ಸುಮಂತ್‌ನ ಸಾವಿನ ಪ್ರಕರಣವನ್ನು ಬೇಧಿಸುವ ನಿಟ್ಟಿನಲ್ಲಿ ಪೊಲೀಸರು ವಿವಿಧ ಆಯಾಮಗಳಲ್ಲಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಪ್ರಕರಣದ ಸಮಗ್ರ ಹಾಗೂ ಸೂಕ್ಷ್ಮ ತನಿಖೆಗಾಗಿ ಅಸಹಜ ಸಾವಿನ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಿ ಪೊಲೀಸರು ತನಿಖೆ ನಡೆಸುತ್ತಿದ್ದು, ಬೆಳ್ತಂಗಡಿ ಡಿವೈಎಸ್‌ಪಿಯವರ ನೇತೃತ್ವದಲ್ಲಿ ವಿಶೇಷ ತಂಡಗಳು ಶೋಧದಲ್ಲಿ ತೊಡಗಿವೆ. ಬಾಲಕ ಸುಮಂತ್ ನಿಗೂಢ ರೀತಿಯಲ್ಲಿ ಸಾವನ್ನಪ್ಪಿರುವುದರಿಂದ ತಮ್ಮ ಪುತ್ರನ ಸಾವಿಗೆ ನ್ಯಾಯ ಒದಗಿಸುವಂತೆ ಪೋಷಕರು ಆಗ್ರಹಿಸಿದ್ದು, ಜತೆಗೆ ಸಾರ್ವಜನಿಕ ವಲಯದಲ್ಲೂ ಪ್ರಕರಣ ಸಾಕಷ್ಟು ಚರ್ಚೆಗೆ ಒಳಗಾಗಿದೆ.
ಸಣ್ಣ ಬಾಲಕನ ಸಾವಿಗೆ ಸಂಬಂಧಿಸಿ ಕೊಲೆ ಎಂಬ ಅನುಮಾನ ಬಂದಾಗ ಅಷ್ಟು ಸಣ್ಣ ಬಾಲಕನ ಮೇಲಿನ ದ್ವೇಷವೇನು ಎಂಬ ರೀತಿ ಸಾರ್ವಜನಿಕರು ಅಭಿಪ್ರಾಯಿಸಿದ್ದರು. ಜತೆಗೆ ಬೇರೆ ಬೇರೆ ರೀತಿಯ ವದಂತಿಗಳೂ ಹರಿದಾಡುತ್ತಿರುವುದರಿಂದ ಪ್ರಕರಣ ಗೊಂದಲವನ್ನು ಸೃಷ್ಟಿಸಿದೆ.
ಮಹತ್ವದ ಸುಳಿವು ಪತ್ತೆ ಹಚ್ಚಲು ಕಾರ್ಯೋನ್ಮುಖರಾಗಿದ್ದೇವೆ ಎಂದು ಎಂದು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಅರುಣ್ ತಿಳಿಸಿದ್ದಾರೆ.




