ದೇವನಹಳ್ಳಿ: ಬ್ಯಾಂಕಾಕ್‌ನಿಂದ ಅಕ್ರಮವಾಗಿ ತರಲಾಗಿದ್ದ 35 ವನ್ಯಜೀವಿಗಳನ್ನು ಕಸ್ಟಮ್ ಅಧಿಕಾರಿಗಳು ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಂಟಿ ಕಾರ್ಯಚರಣೆ ನಡೆಸಿ ಪತ್ತೆ ಹಚ್ಚಿದ್ದಾರೆ.

ವಿಮಾನ ನಿಲ್ದಾಣದ ಟರ್ಮಿನಲ್ ಎರಡರಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ವೇಳೆ ಕಂಡು ಬಂದಿವೆ. ಕಸ್ಟಮ್ಸ್ ಅಧಿಕಾರಿಗಳು ವಶ ಪಡಿಸಿಕೊಂಡ ಪ್ರಾಣಿಗಳಲ್ಲಿ ಸಕ್ವಿರಲ್ ಮಂಕಿಗಳು, ಹಸಿರು, ಹಳದಿ ಹಾಗೂ ಆಲ್ವಿನೋ ಇಗ್ವಾನಾಗಳು, ಬ್ಲೂ ಇಗ್ವಾನಾಗಳು, ಅಬರ್ಟ್ಸ್ ಸ್‌ಕ್ವಿರಲ್‌ಗಳು, ಪಟಾಗೋನಿಯನ್ ಹಾರೆಗಳು ಮತ್ತು ಆಲ್ವಿನೋ ಶುಗರ್‌ಗೈಡರ್ಗಳು ಸೇರಿವೆ.
ಸಾಗಾಟದ ಸಮಯದಲ್ಲಿ ಸರಿಯಾದ ಉಸಿರಾಟದ ವ್ಯವಸ್ಥೆ ಇಲ್ಲದ ಕಾರಣ ಹಲವು ಪ್ರಾಣಿಗಳು ಮೃತಪಟ್ಟಿವೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ನಿವಾಸಿಗಳಾದ ಆರ್ಯನ್ ಗಿತೆ (21), ಅಲ್ಪಾನಾ ಶೇಖ್ (26) ಮತ್ತು ಜರೀನ್ ಶೇಖ್ (46) ಎಂಬ ಮೂವರು ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ತಡೆದು ಪರಿಶೀಲಿಸಿದಾಗ ಅವರ ಬ್ಯಾಗ್ ಗಳಲ್ಲಿ ಅಪರೂಪದ ಮತ್ತು ಅಕ್ರಮವಾಗಿ ತರಲಾದ ವನ್ಯಜೀವಿಗಳು ಕಂಡುಬಂದವು. ಈ ಪ್ರಾಣಿಗಳನ್ನು ತರಲು ಯಾವುದೇ ಕಾನೂನುಬದ್ಧ ಪರವಾನಗಿ ಇರಲಿಲ್ಲ.
ಈ ಮೂವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಕಸ್ಟಮ್ಸ್ ಅಧಿಕಾರಿಗಳು ಎಲ್ಲಾ ಪ್ರಾಣಿಗಳನ್ನು ವೈದ್ಯಕೀಯ ಪರಿಶೀಲನೆ, ಆರೈಕೆ ಮತ್ತು ಮುಂದಿನ ಕ್ರಮಕ್ಕಾಗಿ ರಾಜ್ಯ ವನ್ಯಜೀವಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.




