ಕೇಂದ್ರ ಬಜೆಟ್ ನಲ್ಲಿ ತೆಂಗು ಉತ್ತೇಜನ ಯೋಜನೆ ಘೋಷಣೆ..; ಕರ್ನಾಟಕಕ್ಕೆ ವರದಾನ

Share with

ಬೆಂಗಳೂರು: ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ತೆಂಗಿನ ಬೆಳೆಗೆ ವಿಶೇಷ ಪ್ರಾಧಾನ್ಯತೆ ನೀಡಲಾಗಿದ್ದು ತೆಂಗು ಕೃಷಿಯನ್ನು ಹೆಚ್ಚು ಸ್ಪರ್ಧಾತ್ಮಕ ಮತ್ತು ಉತ್ಪಾದಕವಾಗಿಸಲು ‘ತೆಂಗು ಉತ್ತೇಜನ ಯೋಜನೆ’ಯನ್ನು ಘೋಷಿಸಲಾಗಿದೆ. ಇದು ದೇಶದ ಅತಿ ದೊಡ್ಡ ತೆಂಗು ಉತ್ಪಾದಕ ರಾಜ್ಯವಾದ ಕರ್ನಾಟಕದ ತೆಂಗು ಬೆಳೆಗಾರರ ಪಾಲಿಗೆ ವರವಾಗಲಿದೆ.

ಭಾರತವು ವಿಶ್ವದ ಅತಿದೊಡ್ಡ ತೆಂಗಿನಕಾಯಿ ಉತ್ಪಾದಕ ರಾಷ್ಟ್ರವಾಗಿದ್ದು ಸುಮಾರು 1 ಕೋಟಿ ರೈತರು ಸೇರಿದಂತೆ 3 ಕೋಟಿ ಜನರು ತಮ್ಮ ಜೀವನೋಪಾಯಕ್ಕಾಗಿ ತೆಂಗು ಬೆಳೆಯನ್ನೇ ಅವಲಂಬಿಸಿದ್ದಾರೆ. ದೇಶದ ತೆಂಗು ಬೆಳೆಯ ಪೈಕಿ ಕರ್ನಾಟದ ಪಾಲು ಶೇ.28. ಹೊಸ ಯೋಜನೆಯಡಿಯಲ್ಲಿ ಸರ್ಕಾರವು ಹಲವಾರು ಹಂತಗಳ ಮೂಲಕ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಯೋಜಿಸಲಾಗಿದೆ. ಇದರಲ್ಲಿ ಉತ್ಪಾದಕವಲ್ಲದ ತೆಂಗಿನ ಮರಗಳನ್ನು ಹೊಸ ಮತ್ತು ಉತ್ತಮ ಸಸಿಗಳೊಂದಿಗೆ ಬದಲಾಯಿಸುವುದು ಮತ್ತು ಸುಧಾರಿತ ತಳಿಗಳನ್ನು ಉತ್ತೇಜಿಸುವುದೂ ಸೇರಿವೆ. ವೆಚ್ಚವನ್ನು ನಿಯಂತ್ರಣದಲ್ಲಿಟ್ಟುಕೊಂಡು ರೈತರು ಒಂದೇ ಭೂಮಿಯಿಂದ ಹೆಚ್ಚಿನ ಆದಾಯ ಗಳಿಸಲು ಸಹಾಯ ಮಾಡುವುದು ನೂತನ ತೆಂಗು ಯೋಜನೆಯ ಗುರಿಯಾಗಿದೆ.

ರಾಜ್ಯದಲ್ಲಿ ಮಲೆನಾಡಿಗೆ ಸೀಮಿತವಾದ ಅಡಕೆ ಕೃಷಿ ಮಧ್ಯ ಕರ್ನಾಟಕದ ದಾವಣಗೆರೆ, ಚಿತ್ರದುರ್ಗಕ್ಕೂ ವಿಸ್ತರಣೆ ಆದಂತೆ ತೆಂಗು ಕೃಷಿ ಕೂಡ ಕೇಂದ್ರದ ಉತ್ತೇಜನದಿಂದ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಹೆಚ್ಚಾಗಲು ಅನುಕೂಲವಾಗಲಿದೆ. ವಿಶೇಷವಾಗಿ ತೆಂಗು ಬೆಳೆಯುವ ಮಲೆನಾಡು, ಕರಾವಳಿ ಭಾಗದ ಜತೆಗೆ ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕದಲ್ಲೂ ತೆಂಗು ಕೃಷಿ ಆರಂಭಕ್ಕೆ ಊರುಗೋಲಾಗಲಿದೆ.


Share with

Leave a Reply

Your email address will not be published. Required fields are marked *