ಬಂಟ್ವಾಳ: ಬಿ.ಸಿ.ರೋಡಿನ ಗೂಡಿನ ಬಳಿಯ ಬಳಕದಲ್ಲಿ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂಪಾಯಿಯ ಸೊತ್ತುಗಳು ಸುಟ್ಟು ಭಸ್ಮವಾಗಿ ಮನೆಯಲ್ಲಿದ್ದ ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ಸೋಮವಾರ ನಡೆದಿದೆ.

ಸ್ಥಳೀಯ ನಿವಾಸಿ ಚಾರ್ಲಿ ಡಿಸೋಜ ಅವರಿಗೆ ಸೇರಿದ ಮನೆಯಲ್ಲಿ ವಿಜಯ ಕುಲಾಲ್ ಕುಟುಂಬ ಬಾಡಿಗೆಗೆ ವಾಸವಿದ್ದು, ಬಾಡಿಗೆಯ ಮನೆಯಲ್ಲಿ ಅಗ್ನಿ ಆಕಸ್ಮಿಕ ಉಂಟಾಗಿದೆ. ಘಟನೆಯಲ್ಲಿ ವಿಜಯ ಕುಲಾಲ್ ಗಾಯಗೊಂಡಿದ್ದು, ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಮವಾರ ಬೆಳಗ್ಗೆ 9.30ರ ಸುಮಾರಿಗೆ ವಿಜಯ ಹಾಗೂ ಅವರ ಪುತ್ರಿ ರಕ್ಷಾ ಅವರು ಮನೆಯಲ್ಲಿದ್ದ ಸಂದರ್ಭ ಘಟನೆ ನಡೆದಿದ್ದು, ಬೆಂಕಿ ಹೊತ್ತಿ ಉರಿಯುತ್ತಿದ್ದ ಸಂದರ್ಭ ಸ್ಥಳೀಯರು ಇಬ್ಬರನ್ನು ಹೊರಗೆ ತೆಗೆದು ರಕ್ಷಿಸಿದ್ದಾರೆ. ಈ ವೇಳೆ ವಿಜಯ ಅವರ ದೇಹದಲ್ಲಿ ಸುಟ್ಟ ಗಾಯಗಳಾಗಿವೆ ಎನ್ನಲಾಗಿದೆ. ಘಟನೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.
ರಕ್ಷಾ ಅವರು ಬಿ.ಸಿ.ರೋಡಿನಲ್ಲಿ ಹೊಸದಾಗಿ ಸಣ್ಣ ಟೈಲರಿಂಗ್, ವಸ್ತ್ರ ಮಳಿಗೆಯೊಂದನ್ನು ಆರಂಭಿಸಿದ್ದು, ಅದರ ಸರಕುಗಳನ್ನು ಮನೆಯಲ್ಲಿಟ್ಟಿದ್ದರು. ಬೆಂಕಿಯ ತೀವ್ರತೆಗೆ ಅದೆಲ್ಲವೂ ಸುಟ್ಟು ಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಜತೆಗೆ ಮನೆಯ ಇತರ ಸೊತ್ತುಗಳು ಕೂಡ ಸುಟ್ಟು ಹೋಗಿವೆ.
ಘಟನೆ ನಡೆದ ತತ್ ಕ್ಷಣ ಬಂಟ್ವಾಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಆದರೆ ಸಂಪರ್ಕ ರಸ್ತೆ ಕಿರಿದಾದ ಹಿನ್ನೆಲೆಯಲ್ಲಿ ವಾಹನ ಸಾಗಲು ಸಾಧ್ಯವಾಗಿಲ್ಲ. ಬಳಿಕ ಸಣ್ಣ ವಾಹನದ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಅಗ್ನಿಶಾಮಕ ದಳದ ಸಿಬಂದಿ ಹಾಗೂ ಸ್ಥಳೀಯರು ಬೆಂಕಿ ನಂದಿಸುವ ಕಾರ್ಯ ನಿರ್ವಹಿಸಿದರು. ಆದರೆ ಅದಾಗಲೇ ಬಹುತೇಕ ಸೊತ್ತುಗಳು ಸುಟ್ಟು ಭಸ್ಮವಾಗಿವೆ ಎನ್ನಲಾಗಿದೆ. ಸ್ಥಳಕ್ಕೆ ಗ್ರಾಮ ಆಡಳಿತ ಅಧಿಕಾರಿ ಯಶ್ವಿತಾ ಹಾಗೂ ಸಿಬಂದಿ ಸದಾಶಿವ ಕೈಕಂಬ ಅವರು ಭೇಟಿ ನೀಡಿ ಪರಿಶೀಲಿಸಿದರು.
ಈ ಭಾಗದಲ್ಲಿ ಬಂಟ್ವಾಳ ರೈಲ್ವೇ ನಿಲ್ದಾಣ, ನದಿಗೆ ಅಡ್ಡಲಾಗಿ ರೈಲ್ವೇ ಸೇತುವೆ ಇದ್ದು, ರಸ್ತೆ ಕಿರಿದಾಗಿರುವುದರಿಂದ ಘನ ವಾಹನಗಳು ಸಾಗುವುದು ಕಷ್ಟವಾಗಿದೆ. ರಸ್ತೆ ಅಗಲ ಗೊಳಿಸುವ ಕುರಿತು ಹಲವು ವರ್ಷಗಳಿಂದ ಬೇಡಿಕೆ ಕೇಳಿ ಬರುತ್ತಿದ್ದು, ಸೋಮವಾರ ಅದರ ಅನಿವಾರ್ಯತೆಯ ಅರಿವಾಯಿತು ಎಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ. ವಿಜಯ ಕುಲಾಲ್ ಕುಟುಂಬ ಆರ್ಥಿಕವಾಗಿ ತೀರಾ ಹಿಂದುಳಿದಿದ್ದು, ಅವರ ಜೀವನೋಪಾಯಕ್ಕಾಗಿ ಪುತ್ರಿ ವಸ್ತ್ರ ಉದ್ಯಮ ಆರಂಭಿಸಿದ್ದರು. ಪ್ರಸ್ತುತ ಅದರ ಬಟ್ಟೆ, ಬರೆಗಳು ಸುಟ್ಟು ಹೋಗಿ ಕುಟುಂಬವನ್ನು ಆತಂಕಕ್ಕೀಡು ಮಾಡಿದೆ. ಟೈಲರಿಂಗ್ ಮೆಷಿನ್ ಕೂಡ ಸುಟ್ಟುಹೋಗಿದೆ. ರಮಾನಾಥ ರೈ ಸ್ಥಳಕ್ಕೆ ಭೇಟಿ ನೀಡಿದ್ದಾರೆ.




