ಚಿಕ್ಕಮಗಳೂರು: ಬಿಸಿಲ ಧಗೆ ಹಾಗೂ ತಾಂತ್ರಿಕ ದೋಷದಿಂದಾಗಿ ಚಲಿಸುತ್ತಿದ್ದ ಸರ್ಕಾರಿ ಬಸ್ಸಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು, ಬಸ್ ಧಗಧಗನೆ ಹೊತ್ತಿ ಉರಿದ ಘಟನೆ ನಗರದ ಬೇಲೂರು ರಸ್ತೆಯ ಜ್ಯೂನಿಯರ್ ಕಾಲೇಜು ಬಳಿ ಮಂಗಳವಾರ ನಡೆದಿದೆ.

ಚಾಲಕನ ಸಮಯಪ್ರಜ್ಞೆಯಿಂದಾಗಿ ಬಸ್ಸಿನಲ್ಲಿದ್ದ 32 ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಅದೃಷ್ಟವಶಾತ್ ಪಾರಾಗಿದ್ದಾರೆ.
ಘಟನೆಯ ವಿವರ:
ಚಿಕ್ಕಮಗಳೂರು ಡಿಪೋಗೆ ಸೇರಿದ ಈ ಸರ್ಕಾರಿ ಬಸ್ ನಗರದಿಂದ ಹಾಸನದ ಕಡೆಗೆ ಹೊರಟಿತ್ತು. ಬೇಲೂರು ರಸ್ತೆಯ ಜ್ಯೂನಿಯರ್ ಕಾಲೇಜ್ ಸಮೀಪಿಸುತ್ತಿದ್ದಂತೆ ಬಸ್ಸಿನ ಎಂಜಿನ್ ಭಾಗದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತ ಚಾಲಕ ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಿ, ಪ್ರಯಾಣಿಕರಿಗೆ ಇಳಿಯುವಂತೆ ಸೂಚಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರಾದರೂ, ಬಸ್ಸಿನ ಬಹುತೇಕ ಭಾಗ ಬೆಂಕಿಗೆ ಸುಟ್ಟು ಕರಕಲಾಗಿದೆ.




