16 ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬ್ಯಾನ್‌..; ದೇಶದಲ್ಲೇ ಮೊದಲು..!

Share with

ಬೆಂಗಳೂರು: ಮಕ್ಕಳ ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯದ ಬಗ್ಗೆ ಪ್ರಸಕ್ತ ಬಜೆಟ್‌ನಲ್ಲಿ ಹೆಚ್ಚಿನ ಗಮನ ನೀಡಲಾಗಿದ್ದು, ದೇಶದಲ್ಲೇ ಪ್ರಥಮ ಬಾರಿಗೆ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯನ್ನು ನಿರ್ಬಂಧಿಸುವ ಬಗ್ಗೆ ಘೋಷಣೆ ಮಾಡಲಾಗಿದೆ.

ಈ ಹಿಂದೆ ಆಸ್ಟ್ರೇಲಿಯಾ ದೇಶವು ಮಕ್ಕಳ ಸಾಮಾಜಿಕ ಜಾಲತಾಣ ಬಳಕೆಗೆ ಅಂಕುಶವಿಟ್ಟ ವಿಶ್ವದ ಮೊದಲ ದೇಶವಾಗಿತ್ತು. ಭಾರತದ ಅನೇಕ ರಾಜ್ಯಗಳು ಮಾತ್ರವಲ್ಲದೇ ವಿಶ್ವದ ಅನೇಕ ದೇಶಗಳು ಈ ಆದೇಶವನ್ನು ತಮ್ಮಲ್ಲೂ ಜಾರಿಗೊಳಿಸಬೇಕೆ ಎಂದು ಅಧ್ಯಯನ ನಡೆಸುತ್ತಿರುವ ಸಂದರ್ಭದಲ್ಲಿ, ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯದ ಹಿತ ದೃಷ್ಟಿಯಿಂದ ಈ ಹೆಜ್ಜೆಯನ್ನಿಡುವ ಮಹತ್ವದ ನಿರ್ಧಾರವನ್ನು ಕರ್ನಾಟಕ ತೆಗೆದುಕೊಂಡಿದೆ. ಈ ಮೂಲಕ ಮಕ್ಕಳ ಸಾಮಾಜಿಕ ಜಾಲತಾಣ ಬಳಕೆಗೆ ನಿರ್ಬಂಧ ಹೇರಲು ಮುಂದಾಗಿರುವ ಆಂಧ್ರಪ್ರದೇಶ ಸೇರಿ ಹಲವು ರಾಜ್ಯಗಳು ಕರ್ನಾಟಕದ ಈ ಆದೇಶವನ್ನು ಮಾದರಿಯನ್ನಾಗಿ ಪರಿಗಣಿಸುವ ಸಾಧ್ಯತೆಗಳಿರುವುದು ವಿಶೇಷವಾಗಿದೆ.

ಇನ್ನು ಹದಿಹರೆಯದವರಲ್ಲಿ ಹೆಚ್ಚುತ್ತಿರುವ ಒತ್ತಡ ಮುಂತಾದ ಮಾನಸಿಕ ಸಮಸ್ಯೆಗಳನ್ನು ನಿವಾರಿಸಿ, ಅವರ ಮಾನಸಿಕ ಆರೋಗ್ಯವನ್ನು ಸುಧಾರಿಸಲು ರಾಜ್ಯದ 204 ಬ್ಲಾಕ್ ಸಂಪನ್ಮೂಲ ಕೇಂದ್ರಗಳ (ಬಿಆರ್‌ಸಿ) ಪ್ರತಿ ಕೇಂದ್ರಕ್ಕೆ ಒಬ್ಬರಂತೆ ಅರ್ಹ ಮಾನಸಿಕ ಆರೋಗ್ಯ ಸಲಹೆಗಾರರನ್ನು ನೇಮಿಸುವ ಬಗ್ಗೆ ಘೋಷಿಸಲಾಗಿದೆ.

ಇನ್ನು ವಿದ್ಯಾರ್ಥಿಗಳ ಆರೋಗ್ಯ, ಭವಿಷ್ಯ ಮತ್ತು ವ್ಯಕ್ತಿತ್ವ ರೂಪಿಸುವ ಸ್ಥಳವಾಗಿರುವ ಶಾಲೆ, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಮಾದಕ ವಸ್ತುಗಳ ಬಳಕೆಯನ್ನು ತಡೆಯಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಜಾಗೃತಿ ಕಾರ್ಯಕ್ರಮ, ಬಳಕೆ ತಡೆಗೆ ಕಠಿಣ ನಿಯಮ ಹಾಗೂ ಸಹಾಯ ಕೇಂದ್ರಗಳ ಮೂಲಕ ಆಪ್ತ ಸಮಾಲೋಚನೆ ಮುಂತಾದ ಕ್ರಮಗಳ ಮೂಲಕ ಮಾದಕ ವಸ್ತುಗಳ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗುವುದು ಎಂದೂ ಘೋಷಿಸಿದೆ.


Share with

Leave a Reply

Your email address will not be published. Required fields are marked *