ತಿರುಪತಿಯಲ್ಲಿ ಲಡ್ಡು ಪ್ರಸಾದಕ್ಕೆ ತುಪ್ಪದ ಕೊರತೆಯಿಲ್ಲ; TTD ಸ್ಪಷ್ಟನೆ

Share with

ತಿರುಪತಿ: ತಿರುಮಲ ಶ್ರೀವಾರಿ ಲಡ್ಡು ಪ್ರಸಾದ ತಯಾರಿಕೆಗೆ ಹಸುವಿನ ತುಪ್ಪದ ಕೊರತೆಯಾಗಿದೆ ಎಂಬ ಸಾಮಾಜಿಕ ಜಾಲತಾಣಗಳ ವದಂತಿಯನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಗಳವಾರ ತಳ್ಳಿಹಾಕಿದೆ. ಲಡ್ಡು ತಯಾರಿಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಎಂದು ಸ್ಪಷ್ಟಪಡಿಸಿರುವ ಮಂಡಳಿಯು, ಭಕ್ತರು ಇಂತಹ ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದು ಮನವಿ ಮಾಡಿದೆ.

ಇತ್ತೀಚೆಗೆ ಕಡಪ ಜಿಲ್ಲೆಯ ಕೊಂಡಾಪುರ ಬಳಿ ಇಂದಾಪುರ ಡೈರಿಗೆ ಸೇರಿದ ತುಪ್ಪದ ಟ್ಯಾಂಕ‌ರ್ ಅಪಘಾತವಾಗಿತ್ತು. ಈ ಟ್ಯಾಂಕರ್ ತಿರುಮಲಕ್ಕೆ ತುಪ್ಪ ಹೊತ್ತೊಯ್ಯುತ್ತಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟ್ಯಾಂಕ‌ರ್ ಅಪಘಾತದಿಂದಾಗಿ ತಿರುಮಲದಲ್ಲಿ ತುಪ್ಪದ ಕೊರತೆ ಉಂಟಾಗಿದೆ ಮತ್ತು ಲಡ್ಡು ಪ್ರಸಾದ ತಯಾರಿಕೆ ನಿಂತುಹೋಗಿದೆ ಎಂಬ ಸುಳ್ಳು ಸುದ್ದಿ ಹಬ್ಬಿತ್ತು.

ಈ ಕುರಿತು ಸ್ಪಷ್ಟನೆ ನೀಡಿದ ಟಿಟಿಡಿ, ಟಿಟಿಡಿ ಕೇವಲ ಒಂದು ಕಂಪನಿಯ ಮೇಲೆ ಅವಲಂಬಿತವಾಗಿಲ್ಲ. ಬದಲಾಗಿ ಮೂರು ಪ್ರತ್ಯೇಕ ಸಂಸ್ಥೆಗಳಿಂದ ಹಸುವಿನ ತುಪ್ಪವನ್ನು ಖರೀದಿಸುತ್ತದೆ. ಒಂದು ವೇಳೆ ಯಾವುದಾದರೂ ಒಂದು ಕಂಪನಿಯ ಪೂರೈಕೆಯಲ್ಲಿ ಅಡಚಣೆಯಾದರೂ, ಉಳಿದ ಎರಡು ಸಂಸ್ಥೆಗಳಿಂದ ಸರಬರಾಜು ಮುಂದುವರಿಯುವುದರಿಂದ ಲಡ್ಡು ತಯಾರಿಕೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.

“ಪ್ರಸ್ತುತ ತಿರುಮಲದಲ್ಲಿ ಸುಮಾರು 7 ಲಕ್ಷ ಶ್ರೀವಾರಿ ಲಡ್ಡುಗಳು ಲಭ್ಯವಿದ್ದು, ವಿತರಣೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಬೇಸಿಗೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವುದನ್ನು ಗಮನದಲ್ಲಿಟ್ಟುಕೊಂಡು ಲಡ್ಡು ಉತ್ಪಾದನೆಯನ್ನು ಹೆಚ್ಚಿಸಲು ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ,” ಎಂದು ಟಿಟಿಡಿ ತಿಳಿಸಿದೆ.


Share with

Leave a Reply

Your email address will not be published. Required fields are marked *