ತುಮಕೂರು: ಪ್ರತಿಷ್ಠಿತ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಒಬ್ಬರು ವಿದ್ಯಾರ್ಥಿನಿಯೊಬ್ಬಳಿಗೆ ತರಗತಿಯಲ್ಲೇ ಪ್ರಪೋಸ್ ಮಾಡಿದ ಘಟನೆ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಒಡೆತನದ ಈ ಕಾಲೇಜಿನಲ್ಲಿ ನಡೆದ ಈ ಅಸಭ್ಯ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿರುವ ಆಡಳಿತ ಮಂಡಳಿ, ಸಂಬಂಧಪಟ್ಟ ಪ್ರೊಫೆಸರ್ನನ್ನು ತಕ್ಷಣವೇ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಅಬ್ದುಲ್ ಎಂಬ ಹೆಸರಿನ ಪ್ರೊಫೆಸರ್, “ನಿಮ್ಮ ಬ್ಯಾಚ್ನಿಂದ ಸಿಕ್ಕ ಅಪಾರ ಪ್ರೀತಿಗೆ ನಾನು ಮಾರುಹೋಗಿದ್ದೇನೆ. ನಿಮ್ಮ ಬ್ಯಾಚ್ನ ಅತ್ಯಂತ ಪ್ರಮುಖ ಹುಡುಗಿಗೆ ನಾನು ಪ್ರಪೋಸ್ ಮಾಡಲು ಬಯಸುತ್ತೇನೆ. ಎಲ್ಲರಿಗೂ ಚಾಕೊಲೇಟ್ ಹಂಚುತ್ತೇನೆ” ಎಂದು ಹೇಳಿ ಆ ವಿದ್ಯಾರ್ಥಿನಿಗೆ ನೇರವಾಗಿ “ಐ ಲವ್ ಯೂ” ಎಂದು ಹೇಳಿದ್ದಾರೆ. ಈ ಘಟನೆಯಿಂದ ಇಡೀ ತರಗತಿಯೇ ದಂಗಾಗಿದ್ದು, ವಿದ್ಯಾರ್ಥಿಗಳು ಆಘಾತಕ್ಕೊಳಗಾಗಿದ್ದಾರೆ.
ಪ್ರೊಫೆಸರ್ ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ಆ ವಿದ್ಯಾರ್ಥಿನಿ ಅವರನ್ನು ತರಾಟೆಗೆ ತೆಗೆದುಕೊಂಡು ಪ್ರಾಂಶುಪಾಲರ ಬಳಿ ಬರುವಂತೆ ಸವಾಲು ಹಾಕಿದ್ದಾರೆ. ಆಗ ಅಬ್ದುಲ್ ಉದ್ಧಟತನದಿಂದ ವರ್ತಿಸಿ, “ನೀನೇ ನನಗೆ ಮೊದಲು ಪ್ರಪೋಸ್ ಮಾಡಿದ್ದೆ, ನನ್ನ ಬಳಿ ಸಿಸಿಟಿವಿ ಸಾಕ್ಷ್ಯವಿದೆ” ಎಂದು ಉಲ್ಟಾ ಆರೋಪ ಮಾಡಿದ್ದಾರೆ. ಇದಕ್ಕೆ ವಿದ್ಯಾರ್ಥಿನಿ ಸಾಕ್ಷ್ಯ ಕೇಳಿದಾಗ, “ನಾಳೆ ಮಾತನಾಡೋಣ, ಈಗ ಚಾಕೊಲೇಟ್ ತಿಂದು ಹೋಗಿ” ಎಂದು ಹೇಳಿ ಅಲ್ಲಿಂದ ಹೊರನಡೆದಿದ್ದಾರೆ.
ಈ ವಿಷಯ ಕಾಲೇಜಿನಾದ್ಯಂತ ಹರಡುತ್ತಿದ್ದಂತೆ ರೊಚ್ಚಿಗೆದ್ದ ಇತರ ವಿದ್ಯಾರ್ಥಿಗಳು ಪ್ರೊಫೆಸರ್ನನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ. ವೈರಲ್ ಆದ ಮತ್ತೊಂದು ವಿಡಿಯೋದಲ್ಲಿ ವಿದ್ಯಾರ್ಥಿನಿ ತನ್ನ ಚಪ್ಪಲಿಯಿಂದ ಪ್ರೊಫೆಸರ್ಗೆ ಹೊಡೆಯುತ್ತಿರುವುದು ಮತ್ತು ಇತರ ವಿದ್ಯಾರ್ಥಿಗಳು ಅವರ ಮೇಲೆ ಮುಗಿಬೀಳುತ್ತಿರುವುದು ಕಂಡುಬಂದಿದೆ. ಪ್ರೊಫೆಸರ್ ತಮ್ಮ ಕಾರಿನ ಹತ್ತಿರ ಹೋಗುವವರೆಗೂ ವಿದ್ಯಾರ್ಥಿಗಳು ಅವರನ್ನು ಬೆನ್ನಟ್ಟಿ ಮನಬಂದಂತೆ ಥಳಿಸಿದ್ದಾರೆ.
ವಿದ್ಯಾರ್ಥಿಗಳ ದಾಳಿಯಿಂದ ಗಾಯಗೊಂಡ ಪ್ರೊಫೆಸರ್ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಓಡಿಹೋಗಿದ್ದಾರೆ. ಕಾಲೇಜು ಆಡಳಿತ ಮಂಡಳಿಯು ಈ ಅಶಿಸ್ತಿನ ವರ್ತನೆಗಾಗಿ ಪ್ರೊಫೆಸರ್ ಅಬ್ದುಲ್ನನ್ನು ಸೇವೆಯಿಂದ ಅಮಾನತುಗೊಳಿಸಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಶಿಕ್ಷಕ ಮತ್ತು ವಿದ್ಯಾರ್ಥಿನಿ ನಡುವಿನ ಪವಿತ್ರ ಸಂಬಂಧಕ್ಕೆ ಕಪ್ಪುಚುಕ್ಕೆಯಂತಿರುವ ಈ ಘಟನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.




