ಉಪ್ಪಿನಂಗಡಿ: ಶಿರಾಡಿ ಗ್ರಾಮದ ಕಳಪ್ಪಾರು ಎಂಬಲ್ಲಿ ರವಿವಾರ ಬೆಳಗ್ಗೆ ಮನೆಯ ಹಿಂಬಾಗಿಲು ಮುರಿದು ಮನೆಯೊಳಗೆ ನುಗ್ಗಿ ಕಪಾಟಿನಲ್ಲಿದ್ದ ಚಿನ್ನಾಭರಣವನ್ನು ದೋಚಿರುವ ಘಟನೆ ವರದಿಯಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳಪ್ಪಾರು ನಿವಾಸಿ ಟಿ.ಜೆ. ಕುರಿಯಕೋಸ್ ಎಂಬವರ ಮನೆಯಲ್ಲಿ ಕೃತ್ಯ ನಡೆದಿದ್ದು, ಸುಮಾರು 10 ಗ್ರಾಂ ತೂಕದ ಚಿನ್ನದ ಸರ, 2 ಗ್ರಾಂ ತೂಕದ ಚಿನ್ನದ ಉಂಗುರ, 10 ಗ್ರಾಂ ತೂಕದ ಚಿನ್ನದ ಬಳೆ, 4 ಗ್ರಾಂ ತೂಕದ ಚಿನ್ನದ ನೆಕ್ಲಸ್, 8 ಗ್ರಾಂ ತೂಕದ ಚಿನ್ನದ ಬೆಂಡೋಲೆಗಳು ಸೇರಿದಂತೆ ಒಟ್ಟು ಸುಮಾರು 34 ಗ್ರಾಂ ತೂಕದ ಚಿನ್ನಾಭರಣ ಕಳವು ಆಗಿರುವುದಾಗಿ ಉಪ್ಪಿನಂಗಡಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ರವಿವಾರ ಬೆಳಗ್ಗೆ ಮನೆಗೆ ಬೀಗ ಹಾಕಿ ಚರ್ಚ್‌ಗೆ ತೆರಳಿದ್ದು, ಮನೆಗೆ ಮರಳಿದಾಗ ಮನೆಯ ಹಿಂಬದಿಯ ಬಾಗಿಲು ಮುರಿದು ಕಳ್ಳರು ಒಳನುಗ್ಗಿರುವುದು ಕಂಡು ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.




