ತಿರುವನಂತಪುರಂ: ಕರ್ನಾಟಕದಲ್ಲಿ ಜಾರಿಯಲ್ಲಿರುವ ‘No ಇಡೀ No Entry’ ನಿಯಮದ ಮಾದರಿಯಲ್ಲೇ, ಕೇರಳ ಸರ್ಕಾರವೂ ಮದ್ಯ ಖರೀದಿಗೆ ಗುರುತಿನ ಚೀಟಿ (ID) ಮೂಲಕ ವಯಸ್ಸಿನ ಪರಿಶೀಲನೆ ಕಡ್ಡಾಯ ಮಾಡುವ ಯೋಜನೆ ರೂಪಿಸಿದೆ.
23 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಬೆವ್ಕೋ (Bevco) ಮದ್ಯ ಮಾರಾಟ ಮಳಿಗೆಗಳಿಂದ ಮದ್ಯ ಖರೀದಿಸುತ್ತಿದ್ದಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ಅಬಕಾರಿ ಸಚಿವ ಎಂ. ಲಿಜು ತಿಳಿಸಿದ್ದಾರೆ.

“23 ವರ್ಷಕ್ಕಿಂತ ಕಡಿಮೆ ವಯಸ್ಸಿನವರೇ ಬಾರ್ಗಳಲ್ಲಿ ಗಲಾಟೆ ನಡೆಸಿದ ಪ್ರಕರಣಗಳು ವರದಿಯಾಗಿವೆ. ಕಾನೂನಿನ ಪ್ರಕಾರ ನಿಗದಿಪಡಿಸಿರುವ ವಯೋಮಿತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರ ಸಂಪೂರ್ಣ ಸುರಕ್ಷಿತ ವ್ಯವಸ್ಥೆ ತರಲು ಬಯಸಿದೆ. ಇದರ ಸಂಪೂರ್ಣ ವಿವರಗಳನ್ನು ಶುಕ್ರವಾರ ಪ್ರಕಟಿಸಲಾಗುವುದು” ಎಂದು ಸಚಿವರು ಹೇಳಿದ್ದಾರೆ.
ಆದರೆ ಪ್ರತಿ ಗ್ರಾಹಕರೂ ಕಡ್ಡಾಯವಾಗಿ ಐಡಿ ತೋರಿಸಬೇಕೇ ಅಥವಾ ಅನುಮಾನ ಬಂದಾಗ ಮಾತ್ರ ಪರಿಶೀಲನೆ ನಡೆಯಲಿದೆಯೇ ಎಂಬುದನ್ನು ಸಚಿವರು ಸ್ಪಷ್ಟಪಡಿಸಿಲ್ಲ.
ಕರ್ನಾಟಕದಲ್ಲಿ ಈಗಾಗಲೇ ಜಾರಿಯಲ್ಲಿರುವ ನಿಯಮದಂತೆ, ಮದ್ಯ ಪೂರೈಸುವ ಎಲ್ಲ ಬಾರ್ಗಳು ಹಾಗೂ ಮಳಿಗೆಗಳು ಸರ್ಕಾರದ ಮಾನ್ಯ ಗುರುತಿನ ಚೀಟಿಯನ್ನು ಪರಿಶೀಲಿಸಿದ ಬಳಿಕವೇ ಪ್ರವೇಶ ಅಥವಾ ಸೇವೆ ನೀಡಬೇಕು. ನಿಯಮ ಉಲ್ಲಂಘಿಸಿದರೆ ಭಾರಿ ದಂಡ ಅಥವಾ ಪರವಾನಗಿ ರದ್ದಾಗುವ ಸಾಧ್ಯತೆ ಇದೆ.




