ಪಡುಬಿದ್ರಿ: ಉಡುಪಿ ಜಿಲ್ಲೆಯ ಕರಾವಳಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿನ ತುರ್ತು ಕಡಲ್ಕೂರೆತ ಕಾಮಗಾರಿ ಕೈಗೆತ್ತಿ ಕೊಳ್ಳಲು ತಲಾ 50 ಲಕ್ಷ ರೂ.ಗಳಂತೆ ರಾಜ್ಯ ಸರಕಾರದ ಮೂಲಕ, ಬಂದರು ಹಾಗೂ ಮೀನುಗಾರಿಕ ಸಚಿವಾಲಯದಿಂದ ಒಟ್ಟು 2 ಕೋಟಿ ರೂ. ಈಗಾಗಲೇ ಮಂಜೂರಾಗಿರುವುದಾಗಿ ಬಂದರು ಹಾಗೂ ಮೀನುಗಾರಿಕ ಇಲಾಖಾ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗುರುಲಿಂಗಪ್ಪ ರಾಠೋಡ್ ತಿಳಿಸಿದ್ದಾರೆ.

ಮಳೆಗಾಲದಲ್ಲಿ ಈಗಾಗಲೇ ಕಾಪು ವಿಧಾನಸಭಾ ಕ್ಷೇತ್ರದ ಹೆಜಮಾಡಿ, ಮೂಳೂರು, ಪೊಲಿಪು ಮೊದಲಾದೆಡೆಗಳಲ್ಲಿ ಸ್ವಲ್ಪಮಟ್ಟಿನ ಕೊರೆತದ ಭೀತಿ ಪ್ರಾರಂಭವಾಗಿದೆ. ಇಲಾಖೆ ಮೂಲಕ ಈಗಾಗಲೇ ಈ ಪ್ರದೇಶಗಳ ವೀಕ್ಷಣೆ ನಡೆಸಲಾಗಿದೆ. ಜಿಲ್ಲೆಯ ಕರಾವಳಿಯ ಎಲ್ಲ ಭಾಗಗಳಲ್ಲಿನ ಕಡಲ್ಗೊರೆತಗಳಿಗೆ ಪೂರ್ವಾನ್ವಯವಾಗುವಂತೆ ಈ ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿತ್ತು. ಅದನ್ನನುಸರಿಸಿ ರಾಜ್ಯ ಸರಕಾರವು ಸ್ಪಂದಿಸಿರುವುದಾಗಿ ರಾಠೋಡ್ ತಿಳಿಸಿದರು.




