ಮಂಜೇಶ್ವರದಲ್ಲಿ ಇಂದಿನಿಂದ 3 ದಿನಗಳ ಹಲಸು ಹಣ್ಣಿನ ಮಹಾಮೇಳ ಆರಂಭ; ಉಚಿತ ಜಿಲೇಬಿ, ವಿಶೇಷ ಆಹಾರ, ಅಪರೂಪದ ಉತ್ಪನ್ನಗಳ ಭರ್ಜರಿ ಸಂಭ್ರಮ!

Share with

ಮಂಜೇಶ್ವರ: ಸಪ್ತ ಭಾಷಾ ಸಂಗಮ ಭೂಮಿಯಾದ ಮಂಜೇಶ್ವರದಲ್ಲಿ ಮೊದಲ ಬಾರಿಗೆ ಆಯೋಜಿಸಲಾದ ಮೂರು ದಿನಗಳ ಹಲಸು ಹಣ್ಣಿನ ಮಹಾಮೇಳ ಇಂದಿನಿಂದ (ಜುಲೈ 10) ಆರಂಭವಾಗಿದೆ. ಜುಲೈ 12ರವರೆಗೆ ನಡೆಯಲಿರುವ ಈ ಮೇಳವು ಮಂಜೇಶ್ವರದ ಮೆಜೆಸ್ಟಿಕ್ ಮ್ಯಾನರ್ (ಕಲಾ ಸ್ಪರ್ಶಂ) ಸಭಾಂಗಣದಲ್ಲಿ ಬೆಳಿಗ್ಗೆ 10ರಿಂದ ರಾತ್ರಿ 9 ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರಲಿದೆ.

ಮೇಳದಲ್ಲಿ ವಿವಿಧ ತಳಿಯ ಹಲಸಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು, ಹಲಸಿನಿಂದ ತಯಾರಿಸಿದ ಹಲವು ಬಗೆಯ ವಿಶೇಷ ಆಹಾರ ಪದಾರ್ಥಗಳು ಗಮನ ಸೆಳೆಯಲಿವೆ. ಹಲಸಿನ ಜಿಲೇಬಿ, ಹೋಳಿಗೆ, ಅಪ್ಪ, ಕಬಾಬ್, ಮಂಚೂರಿಯನ್, ಬಿರಿಯಾನಿ ಸೇರಿದಂತೆ ಹಲವಾರು ಖಾದ್ಯಗಳನ್ನು ಸ್ಥಳದಲ್ಲೇ ಸಿದ್ಧಪಡಿಸಿ ಗ್ರಾಹಕರಿಗೆ ನೀಡಲಾಗುತ್ತದೆ.

ಇದರ ಜೊತೆಗೆ ಬೆಂಗಳೂರು ರಾಮನಗರದ ವಿಶೇಷ ಮಾವಿನ ಹಣ್ಣುಗಳು, ತುಮಕೂರು ಹಾಗೂ ಪಾಂಡಿಚೇರಿಯ ಚಂದ್ರ ಹಲಸು, ವಿವಿಧ ತಳಿಯ ಹಣ್ಣುಗಳು, ಹಲಸಿನ ಹಪ್ಪಳ, ಚಿಪ್ಸ್, ಜಾಮ್, ಉಪ್ಪಿನಕಾಯಿ, ಐಸ್‌ಕ್ರೀಂ ಹಾಗೂ ಅಪ್ಪೆಮಿಡಿ ಚಟ್ಟಿ ಸೇರಿದಂತೆ ಮೌಲ್ಯವರ್ಧಿತ ಉತ್ಪನ್ನಗಳು ಮೇಳದಲ್ಲಿ ಲಭ್ಯವಿವೆ.

ಮೇಳದಲ್ಲಿ ಇಳಕಲ್ ಮತ್ತು ಮೈಸೂರು ಸಿಲ್ಕ್ ಸೀರೆಗಳು, ಚೆನ್ನಪಟ್ಟಣದ ಬೊಂಬೆಗಳು, ಮಣ್ಣಿನ ಆಭರಣಗಳು, ಬೇಲೂರಿನ ಶಿಲಾಮೂರ್ತಿಗಳು ಹಾಗೂ ಆಯುರ್ವೇದಿಕ್ ಉತ್ಪನ್ನಗಳು ಕೂಡ ಮಾರಾಟಕ್ಕಿವೆ. ವಿವಿಧ ಹಣ್ಣಿನ ಗಿಡಗಳು, ತರಕಾರಿ ಬೀಜಗಳು ಹಾಗೂ ಹೂವಿನ ಗಿಡಗಳನ್ನು ಖರೀದಿಸುವ ಅವಕಾಶವೂ ಇದೆ.

ಸಾರ್ವಜನಿಕರು ತಮ್ಮಲ್ಲಿರುವ ಜರಿ ಇರುವ ಹಳೆಯ ರೇಷ್ಮೆ ಸೀರೆಗಳನ್ನು ನೀಡಿ ನಗದು ಪಡೆಯುವ ವಿಶೇಷ ವ್ಯವಸ್ಥೆಯೂ ಮಾಡಲಾಗಿದೆ. ಮೇಳಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಹಲಸಿನ ಜಿಲೇಬಿಯನ್ನು ಉಚಿತವಾಗಿ ನೀಡಲಾಗುತ್ತದೆ. ಅಲ್ಲದೆ, ಸೆಲ್ಫಿ ಸ್ಟ್ಯಾಂಡ್‌ನಲ್ಲಿ ಫೋಟೋ ತೆಗೆದು ವಾಟ್ಸಾಪ್ ಸ್ಟೇಟಸ್ ಹಾಕುವವರಿಗೆ ಸದ್ಗುರು ಆಯುರ್ವೇದ ಗ್ರಾಮ್ ಫ್ಲೋರ್ ಸಾಬೂನು ಉಚಿತವಾಗಿ ನೀಡಲಾಗುತ್ತದೆ.

ಮಂಜೇಶ್ವರದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಈ ವಿಶಿಷ್ಟ ಹಲಸು ಹಣ್ಣಿನ ಮೇಳದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.


Share with

Leave a Reply

Your email address will not be published. Required fields are marked *