
ಮಂಜೇಶ್ವರ: ಮಂಜೇಶ್ವರದಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸಲಾದ ಮೂರು ದಿನಗಳ ಮಂಜೇಶ್ವರ ಹಲಸು ಮೇಳ ಅಭೂತಪೂರ್ವ ಯಶಸ್ಸು ಕಂಡಿದ್ದು, ಮೂರು ದಿನಗಳಲ್ಲಿ 60 ಸಾವಿರಕ್ಕೂ ಅಧಿಕ ಮಂದಿ ಮೇಳಕ್ಕೆ ಭೇಟಿ ನೀಡಿ ಹೊಸ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮಂಜೇಶ್ವರ ಮರ್ಸಿ ಚರ್ಚ್‌ನ ಧರ್ಮಗುರು ಎಡ್ವಿನ್ ಫ್ರಾನ್ಸಿಸ್ ಪಿಂಟೋ, “ಮಂಜೇಶ್ವರದಲ್ಲಿ ಮೊದಲ ಬಾರಿಗೆ ನಡೆದ ಹಲಸು ಮೇಳ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಕೃಷಿಕರು, ಹಲಸು ಪ್ರಿಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಮೇಳದ ಯಶಸ್ಸಿಗೆ ಸಾಕ್ಷಿಯಾಗಿದೆ. ಸಂಘ-ಸಂಸ್ಥೆಗಳ ಸಹಕಾರ ಮತ್ತು ಆಯೋಜಕರ ಶ್ರಮದಿಂದ ಮಂಜೇಶ್ವರದಲ್ಲಿ ಹೊಸ ಪರಂಪರೆಗೆ ನಾಂದಿ ಹಾಡಲಾಗಿದೆ,” ಎಂದು ಹೇಳಿದರು.
ಹೊಸಂಗಡಿ ಇನ್ಫೆಂಟ್ ಜೀಸಸ್ ಸೈರೋ ಮಲಬಾರ್ ಚರ್ಚ್‌ನ ಧರ್ಮಗುರು ಲೂಯಿಸ್ ಮರಿಯಾದಾಸ್ ಮಾತನಾಡಿ, “ಜನಸಾಗರವೇ ಮೇಳದ ಯಶಸ್ಸಿನ ಪ್ರತಿಬಿಂಬವಾಗಿದೆ. ಹಲಸಿನ ವಿವಿಧ ತಳಿಗಳು, ಸಾಂಪ್ರದಾಯಿಕ ಖಾದ್ಯಗಳು ಹಾಗೂ ಪರಿಸರ ಸ್ನೇಹಿ ಸಂದೇಶ ಜನರನ್ನು ಆಕರ್ಷಿಸಿವೆ. ಪ್ರತಿಯೊಂದು ಮನೆಯಲ್ಲಿ ಹಲಸಿನ ಮರ ಬೆಳೆಸುವ ಜಾಗೃತಿ ಮೂಡಿಸುವಲ್ಲಿ ಈ ಮೇಳ ಯಶಸ್ವಿಯಾಗಿದೆ. ಮುಂದಿನ ವರ್ಷ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಮೇಳ ನಡೆಯಲಿ,” ಎಂದು ಹಾರೈಸಿದರು.
ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜೀನ್ ಲವಿನಾ ಮೊಂತೆರೋ, ಅಬ್ದುಲ್ಲ ಗುಡ್ಡೆಕ್ಕೇರಿ, ಜೆರಿನಾ ಬಾನು, ಉಷಾ, ನಟಿ ರೂಪಶ್ರೀ ವರ್ಕಾಡಿ, ಕಾರ್ತಿಕ್ ಶೆಟ್ಟಿ ಮಜಿಬೈಲು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಮಂಜೇಶ್ವರ ಹಲಸು ಮೇಳದ ಆಯೋಜಕರಾದ ಪತ್ರಕರ್ತ ರತನ್ ಕುಮಾರ್ ಹೊಸಂಗಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಬೆನಕ ಇವೆಂಟ್ಸ್ ಕುಂದಾಪುರದ ಗಣೇಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು.
ಮೇಳದಲ್ಲಿ ಆರುಕ್ಕೂ ಅಧಿಕ ಹಲಸಿನ ತಳಿಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿತ್ತು. ತುಮಕೂರು ಸೇರಿದಂತೆ ಮಲೆನಾಡು ಭಾಗಗಳಿಂದ ರೈತರು ಮತ್ತು ವ್ಯಾಪಾರಿಗಳು ಭಾಗವಹಿಸಿ ವಿವಿಧ ತಳಿಯ ಹಲಸುಗಳನ್ನು ಪರಿಚಯಿಸಿದರು. ಹಲಸಿನ ಹಣ್ಣು, ತೊಳೆ ಹಾಗೂ ವಿವಿಧ ತಳಿಯ ಸಸಿಗಳ ಖರೀದಿಗೆ ಉತ್ತಮ ಬೇಡಿಕೆ ವ್ಯಕ್ತವಾಯಿತು.
ಹಲಸಿನಿಂದ ತಯಾರಿಸಿದ ಜಿಲೇಬಿ, ಗಟ್ಟಿ, ಅಪ್ಪ, ಕಾಯಿ ಕಬಾಬ್, ಕಾಯಿ ಮಂಚೂರಿ, ಬಿರಿಯಾನಿ, ಕ್ಷೀರ, ಪಾಯಸ, ಬೆಣ್ಣೆ ದೋಸೆ, ಹೋಳಿಗೆ, ಜ್ಯೂಸ್, ಐಸ್‌ಕ್ರೀಂ, ಹಪ್ಪಳ ಹಾಗೂ ಚಿಪ್ಸ್ ಸೇರಿದಂತೆ ಅನೇಕ ವೈವಿಧ್ಯಮಯ ಖಾದ್ಯಗಳು ಮೇಳದ ಪ್ರಮುಖ ಆಕರ್ಷಣೆಯಾಗಿದ್ದವು. ವಿಶೇಷವಾಗಿ ಹಲಸಿನ ಜಿಲೇಬಿ ಮತ್ತು ಹಲಸಿನ ಹೋಳಿಗೆಗೆ ಭಾರೀ ಬೇಡಿಕೆ ಕಂಡುಬಂತು.
ಒಟ್ಟಾರೆಯಾಗಿ, ಮೊದಲ ಪ್ರಯತ್ನದಲ್ಲೇ ಐತಿಹಾಸಿಕ ಯಶಸ್ಸು ದಾಖಲಿಸಿರುವ ಮಂಜೇಶ್ವರ ಹಲಸು ಮೇಳ ರೈತರು, ಉದ್ಯಮಿಗಳು ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಮುಂದಿನ ವರ್ಷ ಇನ್ನಷ್ಟು ವಿಸ್ತೃತವಾಗಿ ಆಯೋಜಿಸಬೇಕೆಂಬ ಒತ್ತಾಯ ಕೇಳಿಬಂದಿದೆ.




