ಹೊಸಂಗಡಿ ಸಮೀಪ ಕೆಎಸ್‌ಆರ್‌ಟಿಸಿ ಬಸ್ ಅಪಘಾತ; 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

Share with

ಕಾಸರಗೋಡು: ಹೊಸಂಗಡಿ ಸಮೀಪದ ಪೊಸೋಟ್‌ನಲ್ಲಿ ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಅಪಘಾತದಲ್ಲಿ ಮಹಿಳೆಯರು ಸೇರಿದಂತೆ 10ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಭಾನುವಾರ ಮಧ್ಯಾಹ್ನ ಸುಮಾರು 1.30ರ ವೇಳೆಗೆ ಅಪಘಾತ ಸಂಭವಿಸಿದೆ. ಕಾಸರಗೋಡಿನಿಂದ ಮಂಗಳೂರಿನತ್ತ ತೆರಳುತ್ತಿದ್ದ ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್ ಅಪಘಾತಕ್ಕೀಡಾಗಿದೆ.

ಹೊಸಂಗಡಿಯಿಂದ ಸರ್ವಿಸ್ ರಸ್ತೆಯ ಮೂಲಕ ಸಾಗುತ್ತಿದ್ದ ಬಸ್ ಬಳಿಕ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ಮೊದಲು ಡಿವೈಡರ್‌ಗೆ ಡಿಕ್ಕಿ ಹೊಡೆದು, ಬಳಿಕ ರಸ್ತೆ ಬದಿಯ ಸುರಕ್ಷತಾ ತಡೆಗೋಡೆಗೆ ಡಿಕ್ಕಿ ಹೊಡೆದು ನಿಂತಿದೆ.

ಅಪಘಾತದಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ. ಬಸ್ ಚಾಲಕರಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಡಿಕ್ಕಿಯ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ.

ಗಾಯಗೊಂಡವರನ್ನು ಸಮೀಪದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಹಿತಿ ತಿಳಿಯುತ್ತಿದ್ದಂತೆ ಹೆದ್ದಾರಿ ಪೊಲೀಸರು ಹಾಗೂ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಸರ್ವಿಸ್ ರಸ್ತೆಯಲ್ಲಿ ಸಂಚರಿಸಬೇಕಿದ್ದ ಬಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿತ್ತು ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಘಟನೆ ಬಳಿಕ ಸ್ಥಳೀಯರು ಹಾಗೂ ಪ್ರಯಾಣಿಕರು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಬಸ್ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ಕೂಡ ನಡೆದಿದೆ.


Share with

Leave a Reply

Your email address will not be published. Required fields are marked *