ಕೋಟೆಕಾರು: ಮಂಗಳೂರು ಮಾಣಿಕ್ಯ, ನೆಲ್ಲಿಸ್ಥಳ, ಕೋಟೆಕಾರು ವತಿಯಿಂದ ಸಮಸ್ತ ವಿಶ್ವಕರ್ಮ ಬಾಂಧವರಿಗಾಗಿ ಆಯೋಜಿಸಲಾಗಿದ್ದ ವಿಶಿಷ್ಟ ಹಾಗೂ ವಿನೋದಭರಿತ ಗ್ರಾಮೀಣ ಕ್ರೀಡಾಕೂಟ ‘ಕೆಸರಿನಲ್ಲಿ ಒಂದು ದಿನ–2026’ ಇತ್ತೀಚೆಗೆ ಕೋಟೆಕಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬಳಿಯ ನೀಲಿಪಾಲು ಗದ್ದೆಯಲ್ಲಿ ವೈಭವಯುತವಾಗಿ ನಡೆಯಿತು.

ಸಮುದಾಯದ ಬಾಂಧವರಲ್ಲಿ ಪರಸ್ಪರ ಸೌಹಾರ್ದತೆ, ಪ್ರೀತಿ ಹಾಗೂ ಐಕ್ಯತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಕ್ರೀಡಾಕೂಟದಲ್ಲಿ ಸುಮಾರು 500ಕ್ಕೂ ಹೆಚ್ಚು ವಿಶ್ವಕರ್ಮ ಸಮುದಾಯದ ಬಾಂಧವರು, ಮಹಿಳೆಯರು, ಮಕ್ಕಳು ಹಾಗೂ ಹಿರಿಯರು ಉತ್ಸಾಹದಿಂದ ಪಾಲ್ಗೊಂಡರು.
ಬೆಳಗ್ಗೆ ರಾಷ್ಟ್ರಧ್ವಜಾರೋಹಣದ ಬಳಿಕ ಗದ್ದೆಗೆ ಹಾಲು ಎರೆಯುವ ಮೂಲಕ ವಿಶಿಷ್ಟವಾಗಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲ್ಲಿಸ್ಥಳ ಶ್ರೀ ಕಾಳಿಕಾಂಬ ದೇವಸ್ಥಾನದ ಅಧ್ಯಕ್ಷರಾದ ಸುಂದರ ಆಚಾರ್ಯ ಕೋಟೆಕಾರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನೆಲ್ಲಿಸ್ಥಳ ಶ್ರೀ ಕಾಳಿಕಾಂಬ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷರಾದ ನಂದಕಿಶೋರ್ ಆಚಾರ್ಯ ಕೊಲ್ಯ, ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಶಿಲ್ಪಾ ಜಗದೀಶ್ ಆಚಾರ್ಯ ಕೋಟೆಕಾರು, ಮಂಗಳೂರು ಮಾಣಿಕ್ಯದ ಅಧ್ಯಕ್ಷರಾದ ಜಯಪ್ರಸಾದ್ ಆಚಾರ್ಯ ಕೋಟೆಕಾರು, ಪ್ರಧಾನ ಅರ್ಚಕರಾದ ಪುರೋಹಿತ ರವಿಚಂದ್ರ ಆಚಾರ್ಯ ಕೋಟೆಕಾರು, ಗೌರವ ಸಲಹೆಗಾರರಾದ ಶಂಕರನಾರಾಯಣ ಆಚಾರ್ಯ ಕೋಟೆಕಾರು ಹಾಗೂ ದಿವಾಕರ ಆಚಾರ್ಯ ಕೋಟೆಕಾರು, ಪುತ್ತೂರು ಉಪಸ್ಥಿತರಿದ್ದರು.
ಮನರಂಜಿಸಿದ ಗ್ರಾಮೀಣ ಕ್ರೀಡೆಗಳು
ದಿನಪೂರ್ತಿ ನಡೆದ ಕ್ರೀಡಾಕೂಟದಲ್ಲಿ ಎಲ್‌ಕೆಜಿ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೆ ವಿವಿಧ ವಯೋಮಾನದವರಿಗೆ ಹಲವು ರೋಚಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಮಕ್ಕಳಿಗಾಗಿ ಓಟದ ಸ್ಪರ್ಧೆ, ಬಕೆಟ್‌ಗೆ ಚೆಂಡು ಹಾಕುವುದು, ಕಪ್ಪೆ ಜಿಗಿತ ಹಾಗೂ ಸೀಸೆಗೆ ಕೆಸರು ನೀರು ತುಂಬಿಸುವ ಸ್ಪರ್ಧೆಗಳು ನಡೆದವು.
ಯುವಕ–ಯುವತಿಯರಿಗಾಗಿ ಕಂಬ ಸುತ್ತಿ ಓಟ, ಹಿಮ್ಮುಖ ಓಟ, ಕೊಡದೊಂದಿಗೆ ಓಟ ಹಾಗೂ ಮೂರು ಕಾಲಿನ ಓಟ ಮುಂತಾದ ಸ್ಪರ್ಧೆಗಳು ಗಮನ ಸೆಳೆದವು.
ದಂಪತಿಗಳಿಗಾಗಿ ‘ಪತಿ ಪತ್ನಿಯನ್ನು ಹೊತ್ತುಕೊಂಡು ಓಟ’, ‘ಬಲೂನ್ ಜೊತೆ ಓಟ’ ಹಾಗೂ ‘ಅಡಿಕೆ ಹಾಳೆ ಎಳೆದುಕೊಂಡು ಓಟ’ ಮುಂತಾದ ಆಕರ್ಷಕ ಸ್ಪರ್ಧೆಗಳು ನಡೆದಿದ್ದು, ಪ್ರೇಕ್ಷಕರನ್ನು ರಂಜಿಸಿದವು.
ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಆಯೋಜಿಸಲಾಗಿದ್ದ ಹಗ್ಗಜಗ್ಗಾಟ ಹಾಗೂ ಮಡಕೆ ಒಡೆಯುವ ಸ್ಪರ್ಧೆಗಳು ಕ್ರೀಡಾಕೂಟಕ್ಕೆ ಮತ್ತಷ್ಟು ಮೆರುಗು ನೀಡಿದವು.
ಸಂಜೆ ಧ್ವಜಾವರೋಹಣದ ಬಳಿಕ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಮಾಣಿಕ್ಯದ ಅಧ್ಯಕ್ಷರಾದ ಜಯಪ್ರಸಾದ್ ಆಚಾರ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವಕರ್ಮ ಕಲಾ ಪರಿಷತ್ ಅಧ್ಯಕ್ಷರಾದ ಡಾ. ಎಸ್.ಪಿ. ಗುರುದಾಸ್ ಆಚಾರ್ಯ ಹಾಗೂ ಧಾರ್ಮಿಕ ಮುಖಂಡರಾದ ಎನ್.ಆರ್. ದಾಮೋದರ ಶರ್ಮ ಬಾರ್ಕೂರು ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.
ಕೆಸರಿನ ಗದ್ದೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡು, ಗ್ರಾಮೀಣ ಕ್ರೀಡೆ, ಸಂಸ್ಕೃತಿ ಹಾಗೂ ಕ್ರೀಡಾ ಮನೋಭಾವವನ್ನು ಅನಾವರಣಗೊಳಿಸಿದ ಈ ಕಾರ್ಯಕ್ರಮವು ವಿಶ್ವಕರ್ಮ ಬಾಂಧವರ ಒಗ್ಗಟ್ಟು, ಸೌಹಾರ್ದತೆ ಹಾಗೂ ಸಹೋದರತ್ವಕ್ಕೆ ಸಾಕ್ಷಿಯಾಯಿತು.




