ಕಠ್ಮಂಡು: ನೇಪಾಳ–ಟಿಬೆಟ್ ಗಡಿಭಾಗದಲ್ಲಿ ಭೀಕರ ಫ್ಲ್ಯಾಶ್ ಫ್ಲಡ್ ಹಾಗೂ ಭೂಕುಸಿತ ಸಂಭವಿಸಿದ್ದು, ಕನಿಷ್ಠ 165 ಮಂದಿ ಮೃತಪಟ್ಟಿದ್ದಾರೆ. 1,300ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕ ವ್ಯಕ್ತವಾಗಿದೆ.

ಆಗಸ್ಟ್ 26ರಂದು ಹಿಮಾಲಯ ಪ್ರದೇಶದಲ್ಲಿ ಸಂಭವಿಸಿದ ಹಿಮನದಿ ಕುಸಿತದಿಂದ ಭಾರೀ ಪ್ರಮಾಣದ ನೀರು, ಹಿಮ, ಕೆಸರು ಮತ್ತು ಬಂಡೆಗಳು ನದಿಗೆ ಹರಿದುಬಂದು ಪ್ರವಾಹ ಉಂಟಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆರಂಭದಲ್ಲಿ ಭೂಕಂಪದಿಂದ ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿತ್ತು. ಆದರೆ ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಸೇರಿದಂತೆ ತಜ್ಞರ ಮೌಲ್ಯಮಾಪನದಲ್ಲಿ ಹಿಮನದಿ ಕುಸಿತವೇ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.
ರಸುುವಾ ಮತ್ತು ನುವಾಕೋಟ್ ಜಿಲ್ಲೆಗಳು ಸೇರಿದಂತೆ ಗಡಿಭಾಗದ ಹಲವು ಪ್ರದೇಶಗಳಲ್ಲಿ ಪ್ರವಾಹ ಭಾರೀ ಹಾನಿ ಉಂಟುಮಾಡಿದೆ. ಮನೆಗಳು, ರಸ್ತೆಗಳು ಹಾಗೂ ಸೇತುವೆಗಳು ಕೊಚ್ಚಿಹೋಗಿದ್ದು, ಹಲವು ಪ್ರದೇಶಗಳು ಸಂಪರ್ಕ ಕಡಿತಗೊಂಡಿವೆ. ಇದರಿಂದ ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಲು ತೀವ್ರ ತೊಂದರೆ ಎದುರಿಸುತ್ತಿವೆ.
ನಾಪತ್ತೆಯಾದವರಲ್ಲಿ ವಿದೇಶಿ ಪ್ರವಾಸಿಗರು ಹಾಗೂ ಕೈಲಾಸ–ಮಾನಸ ಸರೋವರ ಯಾತ್ರಿಕರು ಕೂಡ ಸೇರಿದ್ದಾರೆ. Reuters ಪ್ರಕಾರ, ವಿವಿಧ ದೇಶಗಳ ನೂರಾರು ಪ್ರವಾಸಿಗರು ನಾಪತ್ತೆಯಾಗಿದ್ದು, ಅವರಲ್ಲಿ ಭಾರತೀಯರ ಸಂಖ್ಯೆಯೂ ಗಮನಾರ್ಹವಾಗಿದೆ.
ನೇಪಾಳ ಸೇನೆ ಹಾಗೂ ಭದ್ರತಾ ಪಡೆಗಳು ಹೆಲಿಕಾಪ್ಟರ್ಗಳ ನೆರವಿನಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಆಹಾರ, ಔಷಧಿ ಹಾಗೂ ಇತರ ಪರಿಹಾರ ಸಾಮಗ್ರಿಗಳನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ತಲುಪಿಸಲಾಗುತ್ತಿದೆ. ಭಾರತವೂ ನೇಪಾಳಕ್ಕೆ ಮಾನವೀಯ ನೆರವು ಕಳುಹಿಸಿದೆ.
ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ನಾಪತ್ತೆಯಾದವರಿಗಾಗಿ ಶೋಧ ತೀವ್ರಗೊಳಿಸಲಾಗಿದೆ.




