ಉಡುಪಿ: ಸಂತರು, ಸ್ವಾಮೀಜಿಗಳು, ಧಾರ್ಮಿಕ ಮುಖಂಡರು ಸಮಾಜಕ್ಕೆ ಸೌಹಾರ್ದತೆಯ ಪಾಠ ಮಾಡಬೇಕು. ಸಮಾಜದಲ್ಲಿ ಏನೇ ತಪ್ಪು ನಡೆದರೂ ಅದನ್ನು ತಿದ್ದುವ ಮತ್ತು ಸಮಾಜವನ್ನು ಸರಿದಾರಿಗೆ ಕೊಂಡೊಯ್ಯುವ ಕೆಲಸ ಮಾಡಬೇಕು ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.


ರಾಜಾಂಗಣ ದರ್ಬಾರ್ ಸಭೆಯಲ್ಲಿ ಮಾತನಾಡಿದ ಅವರು, ಧಾರ್ಮಿಕ, ಸಾಮಾಜಿಕ ಚಿಂತನೆಯ ಇಂತಹ ಕಾರ್ಯಕ್ರಮಗಳ ಅಗತ್ಯ ಸಮಾಜಕ್ಕಿದೆ. ಭವಿಷ್ಯದ ಪೀಳಿಗೆಗೆ ಈ ಸಂಸ್ಕಾರ, ಪರಂಪರೆಗಳನ್ನು ವರ್ಗಾಯಿಸುವ ಕಾರ್ಯವೂ ಆಗಬೇಕು. ಶ್ರೀಕೃಷ್ಣ ಮಠವು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ವಿಷಯಗಳಲ್ಲಿ ದಿಕ್ಸೂಚಿ ನೀಡುವ ಸರ್ವ ಧರ್ಮದ ಶಕ್ತಿಕೇಂದ್ರ ಆಗಲಿ ಎಂದು ಆಶಿಸಿದರು.




