ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಇದರ ವತಿಯಿಂದ ಸಂಸ್ಕೃತಿ ಉತ್ಸವ 2024 ಅನ್ನು ಇದೇ ಬರುವ ಜ.23 ಮತ್ತು 24ರಂದು ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ವಿಶ್ವಪ್ರಭಾ ಪುರಸ್ಕಾರ ಸಮಿತಿಯ ಸಂಚಾಲಕ ನಾಗರಾಜ್ ಹೆಬ್ಬಾರ್ ತಿಳಿಸಿದ್ದಾರೆ.


ಉಡುಪಿಯಲ್ಲಿ ಜ.20ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಎಂಜಿಎಂ ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಜ.23ರಂದು ಸಂಜೆ 5:30ಕ್ಕೆ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಅವರು ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಗಡಿನಾಡು ಕನ್ನಡದ ಪ್ರಸಿದ್ಧ ಕಲಾವಿದ ಕಾಸರಗೋಡು ಚಿನ್ನಾ ಅವರಿಗೆ ಶಾರದಾ ಕೃಷ್ಣ ಪುರಸ್ಕಾರ 2024’ಅನ್ನು ಪ್ರದಾನ ಮಾಡಲಾಗುವುದು ಎಂದರು.
ಸಭಾ ಕಾರ್ಯಕ್ರಮದ ಬಳಿಕ ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಬೆಂಗಳೂರಿನ ಕಲಾವಿದ ತೇಜಸ್ವಿ ಅನಂತ್ ಅವರಿಂದ ಪಿಕ್ಸೆಲ್ ಪೋಯಿ, ಯೂನಿ ಸೈಕ್ಲಿಂಗ್, ಜಗಲಿಂಗ್ ಇವುಗಳ ವಿಶಿಷ್ಟ ಕಲಾ ಪ್ರದರ್ಶನ ನಡೆಯಲಿದೆ.
ಜ.23ರಂದು ಸಂಜೆ 5.30ಕ್ಕೆ ಸಾಹಿತಿ ಜಯಂತ್ ಕಾಯ್ಕಿಣಿ ಅವರಿಗೆ ವಿಶ್ವಪ್ರಭಾ ಪುರಸ್ಕಾರ 2024ಅನ್ನು ಪ್ರದಾನ ಮಾಡಲಾಗುವುದು. ಹಿರಿಯ ವಿದ್ವಾಂಸ ನಾಡೋಜ ಪ್ರೊ.ಕೆ.ಪಿ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ.
ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಗಾಂಧಿ ಆಸ್ಪತ್ರೆ ಉಡುಪಿಯ ಆಡಳಿತ ನಿರ್ದೇಶಕ ಡಾ.ಹರೀಶ್ಚಂದ್ರ, ಮುಂಬೈಯ ಮನೋಹರ್ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರಾದ ವಿಶ್ವನಾಥ್ ಶೆಣಿೈ, ಅಧ್ಯಕ್ಷರಾದ ಪ್ರೊ.ಶಂಕರ್, ಉಪಾಧ್ಯಕ್ಷರಾದ ಸಂಧ್ಯಾ ಶೆಣೈ, ಸಂಚಾಲಕ ರವಿರಾಜ್ ಎಚ್.ಪಿ ಉಪಸ್ಥಿತರಿದ್ದರು.




