ಇದೀಗ ಉಡುಪಿ ಜಿಲ್ಲೆಯಲ್ಲಿ ಮತ್ತೊಂದು ಕೊರಗಜ್ಜ ಪವಾಡವೇ ನಡೆದಿದೆ.
ಕೊರಗಜ್ಜ ದೈವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನಪ್ರಿಯ ದೈವ , ಆರಾಧ್ಯ ದೈವವು ಹೌದು. ಜನರು ಬೆಲೆ ಬಾಳುವ ವಸ್ತು ಕಳೆದು ಹೋದರೆ, ಆರೋಗ್ಯ ಸಮಸ್ಯೆ ಬಂದರೆ ಮೊದಲು ಹರಕೆ ಹೊತ್ತುಕೊಳ್ಳುವುದು ಕೊರಗಜ್ಜನಿಗೆ. ಹಲವೆಡೆ ಹರಕೆ ಈಡೇರಿದ ಉದಾಹರಣೆಗಳು ಸಹ ಇವೆ. ತನ್ನನ್ನು ಭಕ್ತಿಯಿಂದ ಪ್ರಾರ್ಥಿಸಿದವರಿಗೆ ಪರಿಹಾರವನ್ನು ಒದಗಿಸುವ ಮೂಲಕ ಕಾರಣಿಕ ಶಕ್ತಿಯನ್ನು ಮೆರೆಯುತ್ತಿರುವ ಕೊರಗಜ್ಜನ ಪವಾಡಕ್ಕೆ ಬೇಕಾದಷ್ಟು ನಿದರ್ಶನಗಳು ಸಿಕ್ಕಿವೆ. ಇದರ ಬೆನ್ನಲ್ಲೇ ಕರಾವಳಿಯಲ್ಲಿ ಮತ್ತೊಮ್ಮೆ ಕೊರಗಜ್ಜ ಪವಾಡ ನಡೆದಿದೆ. ರಾತ್ರಿ ನಿದ್ದೆಗಣ್ಣಿನಲ್ಲಿ ನಡೆಯುತ್ತಿದ್ದ ಮಗುವನ್ನು ತಡೆದು ನಿಲ್ಲಿಸಿ ಕೊರಗಜ್ಜ ಪವಾಡ ಮೆರೆದಿದ್ದಾರೆ. ಉಡುಪಿಯ ಕುಂದಾಪುರ ಕೆದೂರು ಸಮೀಪದ ದಬ್ಬೆಕಟ್ಟೆಯಲ್ಲಿ ಇಂದು ರಾತ್ರಿ 3 ಗಂಟೆಗೆ ಈ ಪವಾಡ ನಡೆದಿದೆ.
ಮಗುವು ನಿದ್ದೆಗಣ್ಣಲ್ಲಿ ರಸ್ತೆಯಲ್ಲಿ ನಡೆದುಕೊಂಡು ಬಂದು ಉಡುಪಿ ಜಿಲ್ಲೆಯ ಕುಂದಾಪುರದ ಕೆದೂರಿನಲ್ಲಿ ಇರುವ ಕಾರಣಿಕದ ಕೊರಗಜ್ಜ ದೈವಸ್ಥಾನ ನಾಮಫಲಕದ ಮುಂದೆ ನಿಂತಿತ್ತು. ಇದೇ ದಾರಿಯಲ್ಲಿ ಮಧ್ಯರಾತ್ರಿ 3 ಗಂಟೆಗೆ ಕೆಲಸ ಮುಗಿಸಿ ಬರುತ್ತಿದ್ದ ವಿಶ್ವ ಎನ್ನುವವರು ಮಗುವನ್ನು ನೋಡಿ ಕಾರು ನಿಲ್ಲಿಸಿದರು. ಬಳಿಕ ಮಗುವನ್ನು ವಿಚಾರಿಸಿದಾಗ ನಿದ್ದೆಗಣ್ಣಲ್ಲಿ ನಡೆದುಕೊಂಡು ಬಂದಿರುವುದು ಬೆಳಕಿಗೆ ಬಂದಿದೆ.
ನಂತರ ವಿಶ್ವ, ಮಗುವನ್ನು ಮರಳಿ ಮನೆಗೆ ಹೋಗಿ ಬಿಟ್ಟು ಮಾನವೀಯತೆ ಮರೆದಿದ್ದಾರೆ, ಕೊರಗಜ್ಜ ಪವಾಡದಿಂದಲೇ ಮಗು ಪಾರಾಗಿ ಬಂದಿದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ.