ಪುತ್ತೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಮತ್ತು ಬಿಜೆಪಿ ಮಧ್ಯೆ ಇದ್ದ ಸಣ್ಣ ಒಡಕಿನಿಂದಾಗಿ ಅಶೋಕ್ ರೈ ಶಾಸಕರಾಗಿ ಆಯ್ಕೆಯಾದರು. ಅಶೋಕ್ ರೈ ಅವರಿಗೆ ಶಾಸಕತ್ವ ಎಂಬುದು ಅರುಣ್ ಕುಮಾರ್ ಪುತ್ತಿಲ ನೀಡಿದ ಭಿಕ್ಷೆ ಎಂದು ಪುತ್ತೂರು ಬಿಜೆಪಿ ವಕ್ತಾರ ರಾಜೇಶ್ ಬನ್ನೂರು ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರುಣ್ ಕುಮಾರ್ ಪುತ್ತಿಲ ಮತ್ತು ಬಿಜೆಪಿ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮುಂದಿನ ಕೆಲವೇ ಸಮಯದಲ್ಲಿ ಬಿಜೆಪಿ ಮತ್ತು ಪುತ್ತಿಲ ಸೇರಿಕೊಂಡು ಜಂಟಿ ಪತ್ರಿಕಾಗೋಷ್ಠಿ ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹೈಕಮಾಂಡ್ನವರನ್ನು ಕೇಳಿಕೊಂಡು ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಶಾಸಕ ಅಶೋಕ್ ರೈ ಅವರು ಬಿಜೆಪಿ ಅಂಗಡಿ ಬಂದಾಗಲಿದೆ ಎಂದು ಹೇಳಿಕೆ ನೀಡಿದ್ದಾರೆ. ಅಶೋಕ್ ರೈ ಅವರು ತಾನು ಹೇಳಿದ್ದೇ ಸರಿ, ತಾನು ಮಾಡಿದ್ದೇ ಸರಿ ಎಂಬ ಧೋರಣೆ ಹೊಂದಿದ್ದಾರೆ. ನಾವು ಶಂಕರ ಆಳ್ವ, ರಾಮ ಭಟ್, ವಿನಯ ಕುಮಾರ್ ಸೊರಕೆ, ಡಿ.ವಿ. ಸದಾನಂದ ಗೌಡ, ಶಕುಂತಳಾ ಶೆಟ್ಟಿ, ಮಲ್ಲಿಕಾ ಪ್ರಸಾದ್, ಸಂಜೀವ ಮಠಂದೂರು ಮುಂತಾದ ಶಾಸಕರನ್ನು ಕಂಡಿದ್ದೇವೆ. ಆದರೆ ಅಶೋಕ್ ರೈ ಅವರಂಥ ಶಾಸಕರನ್ನು ಎಂದೂ ಕಂಡಿಲ್ಲ. ಇನ್ನು ಕಾಣವುದೂ ಬೇಡ ಎಂದರು.
ಮೆಡಿಕಲ್ ಕಾಲೇಜು ಸ್ಥಾಪನೆ ಕೆಲಸಕ್ಕೆ ಮೊದಲು ಕೈ ಹಾಕಿದ್ದು ಶಕುಂತಲಾ ಶೆಟ್ಟಿಯವರು. ಮಂಜೂರಾದ ಸೇಡಿಯಾಪು ಜಾಗದಲ್ಲಿ ಅಕ್ರಮವಾಗಿ ಮರಗಳನ್ನು ಕಡಿಯಲಾಗಿದೆ ಎಂದು ಆಪಾದಿಸಲಾದ ಅವರು, ಈ ಬಗ್ಗೆ ಯಾರೂ ಬಾಯಿ ಬಿಡುತ್ತಿಲ್ಲ. ಹಾರಾಡಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣದಲ್ಲಾಗಿರುವ ಲೋಪಗಳನ್ನು ಬಿಜೆಪಿ ವೀಕ್ಷಿಸಲು ಹೋಗಿದ್ದನ್ನು ಶಾಸಕರು ಲೇವಡಿ ಮಾಡಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷವಾಗಿ ನಾವು ನಮ್ಮ ಕೆಲಸ ಮಾಡಿದ್ದೇವೆ. ಇದನ್ನು ಲೇವಡಿ ಮಾಡುವುದು ಶಾಸಕರ ಘನತೆಗೆ ಶೋಭೆ ತರುವಂಥದ್ದಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ವಿದ್ಯಾ ಗೌರಿ, ಯುವರಾಜ್ ಪೆರೆಯತ್ತೋಡಿ ಮತ್ತಿತ್ತರರು ಉಪಸ್ಥಿತರಿದ್ದರು.




