₹40 ಕೋಟಿ ಹಗರಣದ ಆರೋಪ, ಬೆಳ್ತಂಗಡಿಯ ಶ್ರೀರಾಮ ಕ್ರೆಡಿಟ್‌ ಸೊಸೈಟಿ ವಿರುದ್ಧ ಪ್ರಕರಣ ದಾಖಲು

Share with

ಬೆಳ್ತಂಗಡಿ (ದಕ್ಷಿಣ ಕನ್ನಡ): ಇಲ್ಲಿನ ಶ್ರೀ ರಾಮ ಕ್ರೆಡಿಟ್‌ ಕೋ- ಆಪರೇಟಿವ್‌ ಸೊಸೈಟಿಯಲ್ಲಿ ಗ್ರಾಹಕರು ಠೇವಣಿ ಇಟ್ಟಿದ್ದ ಸುಮಾರು 40 ಕೋಟಿ ರೂ. ಹಣವನ್ನು ವಾಪಸ್‌ ನೀಡದೆ ವಂಚನೆ ಮಾಡಿರುವುದಾಗಿ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಬೆಳ್ತಂಗಡಿ ನಗರದ ಜೂನಿಯರ್‌ ಕಾಲೇಜ್‌ ರಸ್ತೆಯಲ್ಲಿರುವ ರಾಮನಗರದ ವಿ.ಆರ್‌. ನಾಯಕ್‌ ಕಾಂಪೌಂಡ್‌ನಲ್ಲಿ ಸುಮಾರು 25 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಶ್ರೀರಾಮ ಕ್ರೆಡಿಟ್‌ ಕೋ- ಆಪರೇಟಿವ್‌ ಸೊಸೈಟಿಯಲ್ಲಿ ಆಡಳಿತ ಮಂಡಳಿಯವರು ಗ್ರಾಹಕರಿಗೆ ಸೇರಿದ ಠೇವಣಿ ಇಟ್ಟಿದ್ದ ಸುಮಾರು 40 ಕೋಟಿ ರೂ. ಗ್ರಾಹಕರಿಗೆ ಹಣವನ್ನು ಹಿಂತಿರುಗಿಸದೆ ವಂಚನೆ ಮಾಡಿರುವುದಾಗಿ ಆರೋಪಿಸಲಾಗಿದೆ.

ಈ ಬಗ್ಗೆ ಕಳೆದ ವರ್ಷ ಗ್ರಾಹಕರು ಒಟ್ಟಾಗಿ ಸೇರಿ ದಾಖಲೆಗಳನ್ನು ತೆಗೆದು ಡಿಸಿ, ಎಸ್ಪಿ, ಸಹಕಾರ ಸಂಘ, ಗ್ರಾಹಕರ ವೇದಿಕೆ ಸೇರಿದಂತೆ ಎಲ್ಲ ಕಡೆ ದೂರು ನೀಡಿದ್ದರು. ಈ ಬಗ್ಗೆ ಡಿಸಿ ಕಚೇರಿಯಿಂದ ಎಸ್ಪಿಗೆ ದೂರನ್ನು ರವಾನೆ ಮಾಡಲಾಗಿತ್ತು. ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಸೂಚಿಸಿದ್ದರು. ಅದರಂತೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ವಂಚನೆಗೊಳಗಾದ ಬೆಳ್ತಂಗಡಿ ನಿವಾಸಿ ದಯಾನಂದ ನಾಯಕ್‌ ಸೇರಿ ಒಟ್ಟು 13 ಮಂದಿ ನೊಂದ ಗ್ರಾಹಕರು ಗುರುವಾರ ಸೊಸೈಟಿಯ 14 ಮಂದಿ ವಿರುದ್ಧ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು ಅದರಂತೆ ಶುಕ್ರವಾರ ಎಫ್‌ಐಆರ್‌ ದಾಖಲಾಗಿದೆ.

2021ರಿಂದ 2024ರ ವರೆಗೆ ಬ್ಯಾಂಕ್‌ನಲ್ಲಿದ್ದ ಸಿಇಒ ಚಂದ್ರಕಾಂತ್‌, ಅಧ್ಯಕ್ಷ ಪ್ರಭಾಕರ ಸಿ.ಎಚ್‌., ಉಪಾಧ್ಯಕ್ಷ ಸದಾನಂದ ಎಂ. ಉಜಿರೆ, ನಿರ್ದೇಶಕರಾದ ವಿಶ್ವನಾಥ ಆರ್‌. ನಾಯಕ್‌, ಪ್ರಮೋದ್‌ ಆರ್‌. ನಾಯಕ್‌, ವಿಶ್ವನಾಥ, ಜಗನ್ನಾಥ ಪಿ., ರತ್ನಾಕರ, ಸುಮಾ ದಿನೇಶ್‌ ಉಜಿರೆ, ನಯನಿ ಶಿವಪ್ರಸಾದ್‌, ಮೋಹನ್‌ ದಾಸ್‌ ಕೆ., ಕಿಶೋರ್‌ ಕುಮಾರ್‌ ಲಾಯಿಲ, ಬ್ಯಾಂಕ್‌ ಸಿಬ್ಬಂದಿ ಸರಿತಾ ಎಸ್‌. ಮತ್ತು ವಿನೋದ್‌ ಕುಮಾರ್‌ ಸಿ.ಎಚ್‌. ಸೇರಿ ಒಟ್ಟು 14 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ವಂಚನೆಗೊಳಗಾದವರಲ್ಲಿ ಕೇವಲ 13 ಮಂದಿ ಮಾತ್ರ ದೂರು ನೀಡಿದ್ದು, ಸುಮಾರು 200ಕ್ಕೂ ಮಿಕ್ಕಿ ಗ್ರಾಹಕರಿಗೆ ಈ ಸೊಸೈಟಿಯಿಂದ ವಂಚನೆಯಾಗಿದ್ದರೂ ಹೆಚ್ಚಿನವರು ದೂರು ನೀಡಲು ಮುಂದೆ ಬರುತ್ತಿಲ್ಲ ಎಂದು ದೂರುದಾರ ದಯಾನಂದ ನಾಯಕ್‌ ತಿಳಿಸಿದ್ದಾರೆ.


Share with