ಮಂಗಳೂರು: ಆನ್ ಲೈನ್ ಟ್ರೇಡಿಂಗ್ ನಿಂದ ಅಧಿಕ ಲಾಭದ ಆಮಿಷ ಒಡ್ಡಿ ಹಿರಿಯ ನಾಗರಿಕರೊಬ್ಬರಿಗೆ 18.81 ಲಕ್ಷ ರೂ. ವಂಚಿಸಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

75 ವರ್ಷದ ಹಿರಿಯ ನಾಗರಿಕರು ವಂಚನೆಗೆ ಒಳಗಾದವರು. 2025ರ ಡಿ.6ರಂದು ಮೊಬೈಲ್ ನಲ್ಲಿ ನೋಡುತ್ತಿರುವಾಗ ಆನ್ ಲೈನ್ ಟ್ರೇಡಿಂಗ್ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಭಾಷಣ ಇರುವ ವಿಡೀಯೋ ಕಂಡು ಬಂದಿದೆ. ಆ ಬಗ್ಗೆ ಆಕರ್ಷಿತರಾಗಿ ಆನ್ ಲೈನ್ ಟ್ರೇಡಿಂಗ್ ಮಾಡುವ ಉದ್ದೇಶದಿಂದ ಅದರಲ್ಲಿದ್ದ ಲಿಂಕ್ ಅನ್ನು ಕ್ಲಿಕ್ ಮಾಡಿ, ವಿಳಾಸ ನೋಂದಾಯಿಸಿದ್ದಾರೆ.
ಸ್ವಲ್ಪ ಹೊತ್ತಿನಲ್ಲಿ ಮೊಬೈಲ್ ಗೆ ಕರೆ ಬಂದಿದ್ದು, ತನ್ನ ಹೆಸರು ಮೀನಾಕ್ಷಿ ಎಂದು ಪರಿಚಯ ಮಾಡಿಕೊಂಡು ಟ್ರೇಡಿಂಗ್ ಬಗ್ಗೆ ತಿಳಿಸಿದ್ದಾಳೆ. ಆಕೆಯ ಸೂಚನೆಯಂತೆ 21,000 ರೂ.ವನ್ನು ಆಕೆ ತಿಳಿಸಿದ ಬ್ಯಾಂಕ್ ಖಾತೆಗೆ ವರ್ಗಾಹಿಸಿದ್ದಾರೆ. ಆಕೆ ವಾಟ್ಸಪ್ ನಲ್ಲಿ ಕಳುಹಿಸಿದ ಲಿಂಕ್ ನ್ನು ತೆರೆದು ಅದರಲ್ಲಿ ಮಾಹಿತಿ ದಾಖಲಾತಿ ಮಾಡಿದ್ದಾರೆ. ಡಿ.15ರಂದು ಅಕ್ಷರಗೌಡ ಎನ್ನುವ ಹೆಸರಿನ ಯುವತಿ ಆನಂದ ಉನ್ನಿಕೃಷ್ಣ ಎನ್ನುವವರ ಅಸಿಸ್ಟೆಂಟ್ ಎಂದು ಹೇಳಿಕೊಂಡು ಕರೆ ಮಾಡಿ ಟ್ರೇಡ್ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾಳೆ. ಹೆಚ್ಚಿನ ಹಣವನ್ನು ಲಾಭವಾಗಿ ಪಡೆಯಬಹುದು ಎಂದು ತಿಳಿಸಿದ್ದಾಳೆ. ಆಕೆಯ ನಿರ್ದೇಶನದಂತೆ ದೂರುದಾರರು ಡಿ.18ರಿಂದ ಹಂತಹಂತವಾಗಿ ಒಟ್ಟು 18,81,000 ರೂ. ವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಾರೆ.
ದೂರುದಾರರಿಗೆ ಕೋಟಿ ರೂಪಾಯಿಗೂ ಹೆಚ್ಚಿನ ಹಣವನ್ನು ಲಾಭವಾಗಿ ನೀಡುವುದಾಗಿ ನಂಬಿಸಿ ಹೂಡಿಕೆ ಮಾಡಿಸಿದ್ದಾರೆ. ಬಳಿಕ ಇದೊಂದು ವಂಚನಾ ಜಾಲ ಎಂದು ಅರಿವಾಗಿ ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ.




