ಮಂಗಳೂರು: ಆನ್ಲೈನ್ ಮೂಲಕ ಯಾವುದೇ ವಸ್ತುವನ್ನು ಆರ್ಡರ್ ಮಾಡದಿದ್ದರೂ, ನಿಮ್ಮ ಮನೆ ಬಾಗಿಲಿಗೆ ಪಾರ್ಸೆಲ್ ಬಂದರೆ ಎಚ್ಚರ..!

ಅದರಲ್ಲಿನ ವಿಳಾಸ, ಮೊಬೈಲ್ ನಂಬರ್ಎಲ್ಲವೂ ಸರಿ ಇರುತ್ತದೆ ಅಂದರೆ ದಾರಿ ತಪ್ಪಿ ಬಂದಿದ್ದಲ್ಲ. ಆದರೂ ನಿಮಗೆ ಅನುಮಾನ ಬಂದು, ನಾನು ಹೇಳಿಲ್ಲ, ಬೇಡ ಎಂದಾಗ ಡೆಲಿವರಿ ತಂದ ವ್ಯಕ್ತಿ ನಿಮಗೆ, ಒಂದು ಒಟಿಪಿ ಬರುತ್ತದೆ. ಅದನ್ನು ಹೇಳಿ ಎನ್ನುತ್ತಾನೆ. ಅದರಂತೆ ನೀವು ಒಟಿಪಿ ಕೊಡುತ್ತೀರಿ. ಆಗ ನಿಮ್ಮ ಸಂಪೂರ್ಣ ಡಾಟಾ ವಂಚಕರ ಪಾಲಾಗುತ್ತದೆ !
ಸೈಬರ್ ವಂಚಕರ ತಂತ್ರಗಳೂ ಹೊಸ ಹೊಸ ರೂಪ ಪಡೆಯುತ್ತಿವೆ. ಆನ್ಲೈನ್ ಡೆಲಿವರಿ ನೆಪದಲ್ಲಿ ಈ ರೀತಿ ಖಾತೆಗೆ ಕನ್ನ ಹಾಕುವ ಹೊಸ ಮಾದರಿಯ ಪ್ರಕರಣಗಳೂ ವರದಿಯಾಗುತ್ತಿವೆ. ಇದರಿಂದಾಗಿ ನಿಜವಾದ ಡೆಲಿವರಿ ಸಿಬಂದಿ ಬಗ್ಗೆಯೂ ಅನುಮಾನದಿಂದ ನೋಡಬೇಕಾದ ಪರಿಸ್ಥಿತಿ ಉದ್ಭವಿಸಿದೆ.
ನಿರಂತರ ಬರುತ್ತಿತ್ತು ಪಾರ್ಸಲ್ !
ಮಂಗಳೂರು ಹೊರವಲಯದಲ್ಲಿ ಇತ್ತೀಚೆಗೆ ಮಹಿಳೆಯೊಬ್ಬರು ಆನ್ಲೈನ್ನಲ್ಲಿ ಏನನ್ನೂ ಖರೀದಿಸದಿದ್ದರೂ 6-7 ಬಾರಿ ಪಾರ್ಸೆಲ್ ಬಂದಿತ್ತು. ಪ್ರತಿ ಬಾರಿಯೂ ನಾನು ಯಾವುದೇ ವಸ್ತುವನ್ನು ಆರ್ಡರ್ ಮಾಡಿಲ್ಲ ಎಂದು ಹೇಳಿ ಡೆಲಿವರಿ ಬಾಯ್ಯನ್ನು ಕಳುಹಿಸುವುದೇ ಸವಾಲಾಗಿತ್ತು. ಪಾರ್ಸೆಲ್ ತರುತ್ತಿದ್ದವರೂ ಕೂಡ ಬೇರೆ ಬೇರೆಯವರೇ. ಆರ್ಡರ್ ಮಾಡಿಲ್ಲ ಎಂದಾಗ ಒಟಿಪಿ ಬೇಕು ಎಂದು ಕೇಳುತ್ತಿದ್ದರು. ಮಹಿಳೆಗೆ ಇದರ ಬಗ್ಗೆ ಅನುಮಾನವಿತ್ತೇನೋ ಒಟಿಪಿ ನೀಡಲಿಲ್ಲ, ಬಚಾವಾದರು !
ವಂಚನೆ ಮನೆ ಬಾಗಿಲಿಗೆ:
ಒಂದೊಮ್ಮೆ ಎಲ್ಲೋ ಕುಳಿತು ಖಾತೆಗೆ ಕನ್ನ ಹಾಕುತ್ತಿದ್ದ ಖದೀಮರು ಈಗ ಮನೆ ಬಾಗಿಲಿನವರೆಗೆ ತಲುಪಿದ್ದಾರೆಯೇ ಎಂಬ ಆತಂಕ ಶುರುವಾಗಿದೆ. ಇದರಿಂದಾಗಿ ಹಿರಿಯ ನಾಗರಿಕರು, ತಂತ್ರಜ್ಞಾನದ ಅರಿವು ಇಲ್ಲದವರು ವಂಚನೆಗೆ ಒಳಗಾಗುವ ಸಾಧ್ಯತೆಯಿದೆ. ವಂಚಕರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹ.




