ಡಿಎಂಕೆ, ಎಐಎಡಿಎಂಕೆ ಮೈತ್ರಿಯೊಂದಿಗೆ ಸರ್ಕಾರ ರಚನೆ ಕಸರತ್ತು…

2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ರಾಜಕೀಯ ಬೆಳವಣಿಗೆಯ ಪರಿಣಾಮ ವಿಜಯ್ ನೇತೃತ್ವದ ಟಿವಿಕೆ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರು ಕೂಡಾ ಬಹುಮತದ ಕೊರತೆಯಿಂದ ಸರ್ಕಾರ ರಚನೆಗೆ ಕಸರತ್ತು ನಡೆಸುವಂತಾಗಿದೆ. ಏತನ್ಮಧ್ಯೆ ಎಐಎಡಿಎಂಕೆಯ ಶಾಸಕರ “ಖರೀದಿ” ಯತ್ನ ತಡೆಯುವ ನಿಟ್ಟಿನಲ್ಲಿ ರೆಸಾರ್ಟ್ ನಲ್ಲಿ ಬೀಡು ಬಿಟ್ಟಿದ್ದಾರೆ. ಶತಾಯಗತಾಯ ಟಿವಿಕೆ ಸರ್ಕಾರ ಅಧಿಕಾರದ ಗದ್ದುಗೆ ಏರುವುದನ್ನು ತಡೆಯಲು ಕಟ್ಟಾ ವೈರಿ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಪ್ರಾದೇಶಿಕ ಪಕ್ಷಗಳ ಜತೆ ಕೈಜೋಡಿಸಿ ಸರ್ಕಾರ ರಚನೆಗೆ ಮುಂದಾಗಿವೆ ಎಂಬ ಹೊಸ ಬೆಳವಣಿಗೆ ನಡೆದಿರುವುದಾಗಿ ವರದಿ ತಿಳಿಸಿದೆ.
ಟಿವಿಕೆ ಬಹುಮತಕ್ಕಾಗಿ ಕಸರತ್ತು:
ತಮಿಳುನಾಡು ಚುನಾವಣೆಯಲ್ಲಿ ಟಿವಿಕೆ 107 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ಷರತ್ತಿನೊಂದಿಗೆ ಐವರು ಶಾಸಕರು ಬೆಂಬಲ ಘೋಷಿಸಿದ್ದು, ಟಿವಿಕೆ ಸಂಖ್ಯಾಬಲ 112ಕ್ಕೆ ಏರಿಕೆಯಾಗಿದೆ. ಆದರೂ ಕೂಡಾ ಬಹುಮತಕ್ಕೆ ಆರು ಶಾಸಕರ ಕೊರತೆ ಎದುರಾಗಿದೆ. ಕೇರಳದಲ್ಲಿ ಎಡಪಕ್ಷ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಗದ್ದುಗೆ ಏರಲು ಸಜ್ಜಾಗಿದೆ. ಇದರ ಪರಿಣಾಮ ಎಡಪಕ್ಷ ತಮಿಳುನಾಡಿನಲ್ಲಿ ಟಿವಿಕೆ, ಕಾಂಗ್ರೆಸ್ ಮೈತ್ರಿಕೂಟಕ್ಕೆ ಬೆಂಬಲ ನೀಡಲು ಹಿಂದೇಟು ಹಾಕಿದೆ ಎನ್ನಲಾಗಿದೆ.
ಈ ಗೊಂದಲದ ಲಾಭ ಪಡೆಯಲು ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಮೈತ್ರಿ ಮಾತುಕತೆ ತೆರೆಮರೆಯಲ್ಲಿ ನಡೆಯುತ್ತಿದೆ ಎನ್ನಲಾಗಿದ್ದು, ಈ ಮೂಲಕ ವಿಜಯ್ ಮುಖ್ಯಮಂತ್ರಿ ಹುದ್ದೆಗೆ ಏರುವುದನ್ನು ತಡೆಯಲು ಮುಂದಾಗಿವೆ ಎಂದು ವರದಿ ವಿವರಿಸಿದೆ.
ಡಿಎಂಕೆ, ಎಐಎಡಿಎಂಕೆ ಬಳಿ ಬಹುಮತದ ಸಂಖ್ಯಾಬಲ ಇದೆಯೇ?
ಈ ಚುನಾವಣೆಯಲ್ಲಿ ಡಿಎಂಕೆ 59 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಎಐಎಡಿಎಂಕೆ 47 ಸ್ಥಾನಗಳಲ್ಲಿ ಗೆಲುವು ಪಡೆದಿದೆ. ಎರಡೂ ಪಕ್ಷಗಳು ಒಟ್ಟುಗೂಡಿದರೆ ಸಂಖ್ಯಾಬಲ 106ಕ್ಕೆ ಏರಿಕೆಯಾಗಲಿದೆ. ಎಡಿಎಂಕೆ ಮೈತ್ರಿ ಪಕ್ಷವಾದ ಪಿಎಂಕೆ 4 ಸ್ಥಾನ ಹೊಂದಿದ್ದು, ಡಿಎಂಕೆ ಮೈತ್ರಿಯಾದ ಎಡಪಕ್ಷ ನಾಲ್ಕು ಸ್ಥಾನ ಹೊಂದಿದೆ. ಒಂದು ವೇಳೆ ಈ ಎಲ್ಲಾ ಪಕ್ಷಗಳ ಮೈತ್ರಿಯೊಂದಿಗೆ ಡಿಎಂಕೆ, ಎಐಎಡಿಎಂಕೆ ಮೈತ್ರಿ ಕೂಟದ ಸಂಖ್ಯಾಬಲ 114ಕ್ಕೆ ಏರಿಕೆಯಾಗಲಿದೆ. ಇದರೊಂದಿಗೆ ಐಯುಎಂಎಲ್ ಎರಡು ಸ್ಥಾನ ಹೊಂದಿದ್ದು, ಅದು ಬೆಂಬಲ ನೀಡಿದಲ್ಲಿ ಸಂಖ್ಯಾಬಲ 116ಕ್ಕೆ ಏರಿಕೆಯಾಗಲಿದೆ. ಜತೆಗೆ ದಲಿತ ಒಕ್ಕೂಟದ ವಿಸಿಕೆ ಎರಡು ಸ್ಥಾನಗಳನ್ನು ಹೊಂದಿದ್ದು ಈ ಪಕ್ಷ ಬೆಂಬಲ ನೀಡಿದಲ್ಲಿ ಮ್ಯಾಜಿಕ್ ಸಂಖ್ಯೆ 118ಕ್ಕೆ ಏರಲಿದ್ದು, ಸರ್ಕಾರ ರಚಿಸುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಪುದುಚೇರಿ ರೆಸಾರ್ಟ್ ನಲ್ಲಿ ಎಐಎಡಿಎಂಕೆ ಶಾಸಕರ ಠಿಕಾಣಿ:
ನೂತನವಾಗಿ ಆಯ್ಕೆಗೊಂಡ ಎಐಎಡಿಎಂಕೆ ಶಾಸಕರು ಕುದುರೆ ವ್ಯಾಪಾರ ಭಯದಿಂದ ಪುದುಚೇರಿ ರೆಸಾರ್ಟ್ ನಲ್ಲಿ ಬೀಡು ಬಿಟ್ಟಿರುವುದಾಗಿ ವರದಿ ತಿಳಿಸಿದೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ, ಟಿವಿಕೆಗೆ ಷರತ್ತುರಹಿತ ಬೆಂಬಲ ನೀಡಲು ಸಿದ್ಧವಿರುವುದಾಗಿ ತಿಳಿಸಿದೆ. ಆದರೆ ಪರಸ್ಪರ ಗೌರವ ನೀಡುವುದು ಅಗತ್ಯ ಎಂದು ಹೇಳಿದೆ. ಆದರೆ ಟಿವಿಕೆಗೆ ಕಾಂಗ್ರೆಸ್ ಬೆಂಬಲ ಘೋಷಿಸಿದ ನಂತರ ಎಐಎಡಿಎಂಕೆ ಜತೆಗಿನ ಮಾತುಕತೆಯನ್ನು ಟಿವಿಕೆ ಸ್ಥಗಿತಗೊಳಿಸಿದೆ.




