ಕಾಸರಗೋಡು: ವರ್ಕ್ ಪ್ರಂ ಹೋಮ್ ಉದ್ಯೋಗ ಭರವಸೆ ನೀಡಿ ಹಾಗೂ ಆನ್‌ಲೈನ್ ಟ್ರೇಡಿಂಗ್ ಮೂಲಕ ಕಾಸರಗೋಡಿನ ವೈದ್ಯರೋರ್ವರಿಗೆ 2.23 ಕೋಟ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸುನಿಲ್ ಕುಮಾರ್ ಜಾನ್ವರ್(24)ನನ್ನು ರಾಜಸ್ಥಾನದ ಜೋದ್‌ಪುರದಿಂದ ಕಾಸರಗೋಡು ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾ ಅವರ ಮೇಲ್ನೋಟದಲ್ಲಿ ಕಾಸರಗೋಡು ಸೈಬರ್ ಕ್ರೈಂ ಪೊಲೀಸರು ರಾಜಸ್ಥಾನದ ಶಾಸ್ತ್ರೀ ನಗರ ಪೊಲೀಸ್ ಠಾಣೆಯ ಪೊಲೀಸರ ನೆರವಿನೊಂದಿಗೆ ಬಂಧಿಸಿದರು. ಐದು ದಿನಗಳ ನಿರಂತರ ಶ್ರಮದಿಂದ ಬಂಧಿಸಲು ಸಾಧ್ಯವಾಯಿತೆಂದು ಪೊಲೀಸರು ತಿಳಿಸಿದ್ದಾರೆ. ಟೆಲಿಗ್ರಾಂ ಹಾಗು ಫೋನ್‌ನಲ್ಲಿ ಸಂಪರ್ಕಿಸಿ ಉದ್ಯೋಗ ಭರವಸೆ ನೀಡಿ 2,23,949,93 ರೂ.ವಂಚಿಸಿದ್ದಾಗಿ ಡಾಕ್ಟರ್ ದೂರು ನೀಡಿದ್ದರು.
ಜಿಲ್ಲಾ ಕ್ರೈಂ ಬ್ರ್ಯಾಂಚ್ ಡಿವೈಎಸ್‌ಪಿ ಸುನಿಲ್ ಕುಮಾರ್ ನೇತೃತ್ವದಲ್ಲಿ ಕಾಸರಗೋಡು ಸೈಬರ್ ಕ್ರೈಂ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಶ್ರೀದಾಸನ್ ಎಂ.ವಿ., ಎಎಸ್‌ಐ ಪ್ರಶಾಂತ್, ಸೀನಿಯರ್ ಸಿವಿಲ್ ಪೊಲೀಸ್ ಅಧಿಕಾರಿಗಳಾದ ನಾರಾಯಣನ್, ದಿಲೀಪ್ ಅವರನ್ನೊಳಗೊಂಡ ತಂಡ ಬಂಧಿಸಿತು.
ವೈದ್ಯರಿಂದ ಲಪಟಾಯಿಸಿದ ಹಣದಲ್ಲಿ 18 ಲಕ್ಷ ರೂ. ಆರೋಪಿಯ ಬ್ಯಾಂಕ್ ಖಾತೆಗೆ ಬಂದಿತ್ತು. ಅದನ್ನು ಆತ ಚೆಕ್ ಬಳಸಿ ಹಿಂಪಡೆದಿದ್ದನು. ಬಂಧಿತನನ್ನು ಕಾಸರಗೋಡಿಗೆ ಕರೆತರಲಾಗಿದೆ. ಈ ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳಿದ್ದಾರೆಂದು ಪೊಲೀಸರಿಗೆ ಮಾಹಿತಿ ಲಭಿಸಿದೆ. ಕೆಲವು ದಿನಗಳ ಹಿಂದೆ ಪಯ್ಯನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಮುಹಮ್ಮದ್ ನೌಶಾದ್(45)ನನ್ನು ಬಂಧಿಸಲಾಗಿತ್ತು