ಕೇರಳ ಕಾಂಗ್ರೆಸ್ ನಲ್ಲಿ ಮುಂದುವರಿದ ಸಿಎಂ ಆಯ್ಕೆ ಕಗ್ಗಂಟು

ಕೇರಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದು 9 ದಿನಗಳು ಕಳೆಯುತ್ತಾ ಬಂದರೂ ಕೂಡಾ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಇನ್ನೂ ಮುಖ್ಯಮಂತ್ರಿ ಯಾರೆಂಬುದನ್ನು ನಿರ್ಧರಿಸಿಲ್ಲ. ಈಗಾಗಲೇ ಪಶ್ಚಿಮಬಂಗಾಳದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ಹಾಗೂ ತಮಿಳುನಾಡಿನಲ್ಲಿ ಟಿವಿಕೆಯ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಯುಡಿಎಫ್ ಸಿಎಂ ಆಯ್ಕೆಗಾಗಿ ಕಸರತ್ತು ನಡೆಸುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಸರ್ಕಾರ ರಚಿಸಲು ನಿಗದಿಯಾಗಿರುವ ಸಾಂವಿಧಾನಿಕ ಗುಡುವು ಸಮೀಪಿಸುತ್ತಿದ್ದು, ಒಂದು ವೇಳೆ ಕಾಂಗ್ರೆಸ್ ಸಿಎಂ ಯಾರೆಂದು ಘೋಷಿಸದಿದ್ದರೆ ಮುಂದೇನಾಗಲಿದೆ ಎಂಬ ವಿಶ್ಲೇಷಣೆ ಇಲ್ಲಿದೆ…
ಸಾಂವಿಧಾನಿಕ ಚೌಕಟ್ಟಿನ ಗಡುವಿನಂತೆ 10 ದಿನದೊಳಗೆ ಸಿಎಂ ಆಯ್ಕೆ ಮಾಡಬೇಕು:
ಕೇರಳದ ಹಾಲಿ ಸರ್ಕಾರ ಈಗ ಕಟ್ಟುನಿಟ್ಟಿನ ಸಾಂವಿಧಾನಿಕ ಕಾಲಮಿತಿ ಗಡಿಯೊಳಗೆ ಕಾರ್ಯನಿರ್ವಹಿಸುತ್ತಿದೆ. ಸಂವಿಧಾನದ ಆರ್ಟಿಕಲ್ 172ರ ಅನ್ವಯ ರಾಜ್ಯದ ವಿಧಾನಸಭೆಯು ಮೊದಲ ಕಲಾಪದಿಂದ ಆರಂಭಿಸಿ, ವಿಧಾನಸಭೆ ವಿಸರ್ಜನೆಯೊಂದಿಗೆ ಐದು ವರ್ಷಗಳ ಕಾಲಮಿತಿ ಹೊಂದಿರುತ್ತದೆ.
ಕೇರಳದ ವಿಚಾರದಲ್ಲಿ 2021ರ ಮೇ 24ರಿಂದ ಐದು ವರ್ಷಗಳ ಅವಧಿ ಆರಂಭ. ಸಂವಿಧಾನದ ಪ್ರಕಾರ 2026ರ ಮೇ 23ರಂದು ಕೇರಳ ಹಾಲಿ ವಿಧಾನಸಭೆ ಅವಧಿ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ (ಮೇ 13) ಯುಡಿಎಫ್ ಗೆ ತನ್ನ ಮುಂದಿನ ಮುಖ್ಯಮಂತ್ರಿ ಯಾರೆಂದು ನಿರ್ಧರಿಸಿ, ಸರ್ಕಾರ ರಚಿಸಲು ಕೇವಲ 10 ದಿನಗಳು ಮಾತ್ರವೇ ಉಳಿದಂತಾಗಿದೆ.
ಒಂದು ವೇಳೆ ಯುಡಿಎಫ್ ಮೇ 23ರೊಳಗೆ ಕಾಂಗ್ರೆಸ್ ಸಿಎಂ ಯಾರೆಂದು ಘೋಷಿಸದಿದ್ದರೆ, ಈ ಬೆಳವಣಿಗೆ ರಾಜ್ಯದಲ್ಲಿ ಆರ್ಟಿಕಲ್ 356ರ ಪ್ರಕಾರ ರಾಷ್ಟ್ರಪತಿ ಆಡಳಿತ ಜಾರಿ ಮಾಡುವಂತೆ ರಾಜ್ಯಪಾಲರು ಶಿಫಾರಸು ಮಾಡಲು ಕಾರಣವಾಗಲಿದೆ.
ನಂತರ ರಾಜ್ಯಪಾಲರ ಶಿಫಾರಸಿನಂತೆ ಕೇಂದ್ರ ಸರ್ಕಾರ ನೂತನ ಶಾಸಕರ ಆಯ್ಕೆಯನ್ನು ರದ್ದುಗೊಳಿಸುವ ಮೂಲಕ ಹೊಸದಾಗಿ ಚುನಾವಣೆ ನಡೆಸಬೇಕಾದ ಸನ್ನಿವೇಶ ತಲೆದೋರಲಿದೆ.
ಸಿಎಂ ಆಯ್ಕೆಯಾಗದಿದ್ರೆ ಏನಾಗಲಿದೆ?
ಒಂದು ವೇಳೆ ಸಾಂವಿಧಾನಿಕ ಗಡುವಿನೊಳಗೆ (10 ದಿನ) ಮುಖ್ಯಮಂತ್ರಿಯನ್ನು ಆಯ್ಕೆ ಮಾಡದಿದ್ದರೆ ವಿಧಾನಸಭೆ ಸ್ವಯಂ ವಿಸರ್ಜನೆಗೊಳ್ಳಲಿದೆ. ಇದರೊಂದಿಗೆ ನಿರ್ಗಮನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಹಂಗಾಮಿಯಾಗಿ ಆಡಳಿತ ನಿರ್ವಹಿಸಬೇಕಾಗುತ್ತದೆ. ಆದರೆ ಈ ಸಂದರ್ಭದಲ್ಲಿ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವ ಅಧಿಕಾರ ಇವರಿಗೆ (ಪಿಣರಾಯಿ) ಇರುವುದಿಲ್ಲ.
ಕಾಂಗ್ರೆಸ್ ಗೆ ಸಿಎಂ ಆಯ್ಕೆ ಕಗ್ಗಂಟು:
ಕೇರಳ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿಗಾದಿಗಾಗಿ ತೀವ್ರ ಪೈಪೋಟಿ ಎದುರಾಗಿದ್ದರಿಂದ ಸಿಎಂ ಆಯ್ಕೆ ಕಗ್ಗಂಟು ಮುಂದುವರಿಯುಂತಾಗಿದೆ. ಕಾಂಗ್ರೆಸ್ ಹಿರಿಯ ಮುಖಂಡ ವಿ.ಡಿ.ಸತೀಶನ್ ಅವರು ತಮಗೆ ಸಾರ್ವಜನಿಕ ಬೆಂಬಲ ಇರುವುದಾಗಿ ಬಿಂಬಿಸಿಕೊಂಡಿದ್ದರೆ, ರಮೇಶ್ ಚನ್ನಿತ್ತಾಲ್ ಅವರು ಪಕ್ಷದ ಹಿರಿಯ ಮುಖಂಡರಾಗಿ ಗುರುತಿಸಿಕೊಂಡಿದ್ದಾರೆ. ಏತನ್ಮಧ್ಯೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಪ್ರವೇಶದಿಂದ ಸಿಎಂ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ ಎನ್ನಲಾಗಿದೆ. ಕೆಸಿ ವೇಣುಗೋಪಾಲ್ ಅವರಿಗೆ 43 ಶಾಸಕರ ಬೆಂಬಲವಿದೆ. ಆದರೆ ಕೆಸಿ ಅವರು ಕೇರಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ.
ಈ ನಿಟ್ಟಿನಲ್ಲಿ ಹಾಲಿ ಶಾಸಕರಲ್ಲದ ವ್ಯಕ್ತಿಯನ್ನು ಸಿಎಂ ಹುದ್ದೆಗೆ ಆಯ್ಕೆ ಮಾಡುವುದು ಸರಿಯೇ ಎಂಬ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ. ಆದಾಗ್ಯೂ ಆರ್ಟಿಕಲ್ 164 (4)ರ ಅನ್ವಯ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಪ್ರಕಾರ, ಶಾಸಕರಲ್ಲದ ವ್ಯಕ್ತಿಯನ್ನೂ ಸಿಎಂ ಆಗಿ ಆಯ್ಕೆ ಮಾಡಬಹುದು. ಆದರೆ ಆರು ತಿಂಗಳೊಳಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಬೇಕು ಎಂಬ ಷರತ್ತನ್ನು ವಿಧಿಸಿತ್ತು. ಒಂದು ವೇಳೆ ಚುನಾವಣೆಯಲ್ಲಿ ಪರಾಜಯಗೊಂಡರೆ ಸಿಎಂ ಹುದ್ದೆ ತೊರೆಯಬೇಕಾಗುತ್ತದೆ.




