ಬುಡಾಪೆಸ್ಟ್: ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಮೊದಲ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
ಈ ಮೂಲಕ 2024 ರಲ್ಲಿ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ ಗೇಮ್ಸ್‌ಗೆ ನೀರಜ್ ಚೋಪ್ರಾ ಅರ್ಹತೆ ಪಡೆದುಕೊಂಡಿದ್ದಾರೆ.
ಒಲಿಂಪಿಕ್ಸ್ ಅರ್ಹತೆಗಾಗಿ ಈಗಾಗಲೇ ವಿಂಡೋ ತೆರೆಯಲಾಗಿದ್ದು, ಇದಕ್ಕಾಗಿ 85.50 ಮೀಟರ್ ದೂರ ನಿಗದಿ ಮಾಡಲಾಗಿತ್ತು. ಫೈನಲ್‌ನ ಅರ್ಹತಾ ಸುತ್ತಿನಲ್ಲಿ 88.77 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ನೀರಜ್ ಚೋಪ್ರಾ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆದುಕೊಂಡಿದ್ದರು.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ 88.17 ಮೀಟರ್ ದೂರ ಭರ್ಜಿ ಎಸೆಯುವ ಮೂಲಕ ನೀರಜ್ ಚೋಪ್ರಾ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ತಾರೆ ಎಂಬ ದಾಖಲೆ ನಿರ್ಮಿಸಿದ್ದಾರೆ.
2022ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ನಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದಿದ್ದರು. ಈ ಬಾರಿ ಸ್ವರ್ಣ ಪದಕಕ್ಕೆ ಕೊರೊಳೊಡ್ಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಮೊದಲ ಸುತ್ತಿನಲ್ಲೇ ಫೌಲ್ ಮಾಡಿದ್ದ ನೀರಜ್ ಚೋಪ್ರಾ, 2ನೇ ಸುತ್ತಿನಲ್ಲಿ 88.17 ಮೀಟರ್ ದೂರಕ್ಕೆ ಎಸೆಯುವ ಮೂಲಕ ಅಗ್ರಸ್ಥಾನ ಪಡೆದರು. ಇದೇ ವೇಳೆ ತನ್ನ ಎರಡನೇ ಎಸೆತದಲ್ಲಿ ಜರ್ಮನಿಯ ಜೂಲಿಯನ್ ವೆಬೆರ್ 85.79 ದೂರವನ್ನು ಕ್ರಮಿಸುವ ಮೂಲಕ ಭಾರತೀಯ ಆಟಗಾರನಿಗೆ ಪೈಪೋಟಿ ನೀಡುವ ಸೂಚನೆ ನೀಡಿದರು.
ಫೈನಲ್ ಸುತ್ತಿನಲ್ಲಿ ಪಾಕಿಸ್ತಾನದ ಅರ್ಷದ್ ನದೀಮ್ 81.86 ಮೀಟರ್ ದೂರ ಎಸೆಯಲಷ್ಟೇ ಶಕ್ತರಾದರು. ಇತ್ತ ನೀರಜ್ ಚೋಪ್ರಾ 83.98 ಮೀಟರ್ ದೂರದೊಂದಿಗೆ ಫೈನಲ್ ರೌಂಡ್ ಅಂತ್ಯಗೊಳಿಸಿದರು. ಇದರೊಂದಿಗೆ ಮೊದಲ ಸುತ್ತಿನಲ್ಲಿ 88.17 ಮೀಟರ್ ದೂರ ಭರ್ಜಿ ಎಸೆದಿದ್ದ ನೀರಜ್ ಚೋಪ್ರಾ ಅಗ್ರಸ್ಥಾನದೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.