ವಿಟ್ಲ: ಇಲ್ಲಿನ ಕಂಬಳಬೆಟ್ಟು ಅಮೈ ಎಂಬಲ್ಲಿ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೆ ಹಾಗೂ ಪರವಾನಗಿ ಇಲ್ಲದೆ ಅಕ್ರಮವಾಗಿ ಸುಡುಮದ್ದು ತಯಾರಿಸುತ್ತಿದ್ದ ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸರು ದಾಳಿ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಸ್ಥಳೀಯ ನಿವಾಸಿ ಜಗದೀಶ ಪೂಜಾರಿ ಬಂಧಿತ ಆರೋಪಿ. ಈತ ಸುಡುಮದ್ದಿಗೆ ಬೇಕಾಗುವ ಸ್ಪೋಟಕ ಸಾಮಗ್ರಿಗಳನ್ನು ತನ್ನ ಮನೆಯ ಆವರಣದಲ್ಲಿ ಯಾವುದೇ ಮುನ್ನೆಚ್ಚರಿಕೆ ವಹಿಸದೇ ಶೇಖರಿಸಿದ್ದನೆನ್ನಲಾಗಿದೆ.
ಸುಮಾರು 1.9 ಕೆ.ಜಿ ಯಷ್ಟು ಸ್ಪೋಟಕದಂತಹ ಸಂಶಯಾಸ್ಪದ ವಸ್ತು ಪತ್ತೆಯಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.




