ಮಂಗಳೂರು: ಮಂಗಳೂರಿನಲ್ಲಿ ಮೊದಲ ಬಾರಿಗೆ ಹೊಟೇಲೊಂದು ರೋಬೋ ವೈಟರ್ ಮೂಲಕ ಸೇವೆ ನೀಡಲಾರಂಭಿಸಿದೆ.

ಕಾರ್ಮಿಕರ ಹೊರೆ ತಪ್ಪಿಸಲು ಹಾಗೂ ಏಕಕಾಲಕ್ಕೆ ಹಲವು ಗ್ರಾಹಕರಿಗೆ ಸೇವೆ ನೀಡುವ ಹಿನ್ನೆಲೆಯಲ್ಲಿ ನಗರದ ಕೆ.ಎಸ್. ರಾವ್ ರಸ್ತೆಯ ಪಾಕಶಾಲ ಹೊಟೇಲ್ ನಲ್ಲಿ ಜನರ ಸೇವೆಗೆ ರೋಬೊಟ್ ತಂತ್ರಜ್ಞಾನ ಬಳಸಲಾಗಿದೆ. ಗ್ರಾಹಕರಿಗೆ ಅದರಲ್ಲೂ ಮಕ್ಕಳಿಗೆ ಇದು ಹೊಸ ಆಕರ್ಷಣೆಯ ಅಂಶ.
ಪಾಕಶಾಲದ ಬೆಂಗಳೂರಿನ ಶಾಖೆಗಳಲ್ಲಿ ರೋಬೊ ಈ ಹಿಂದೆಯೇ ಪರಿಚಯಿಸಲಾಗಿದ್ದು, ಇದೀಗ ಮಂಗಳೂರಿನ ಸರಣಿ. ಹೊಟೇಲ್ ನಲ್ಲಿರುವ ಎಲ್ಲ ಟೇಬಲ್ ಗಳ ಬಳಿಯೂ ಚಲಿಸುತ್ತದೆ. ಫುಡ್ ಹಾಗೂ ಜ್ಯೂಸ್ ಎರಡು ಮೋಡ್ ಗಳನ್ನು ಒಳಗೊಂಡಿದೆ. ಫುಡ್ ಮೋಡ್ ಸ್ವಲ್ಪ ವೇಗವಾಗಿ ಸಾಗಿದರೆ, ಜ್ಯೂಸ್ ಮೋಡ್ ನಲ್ಲಿದ್ದಾಗ ನಯವಾಗಿ ಜ್ಯೂಸ್ ಚೆಲ್ಲದಂತೆ ಚಲಿಸುತ್ತದೆ.
ಜಪಾನ್ ಮೂಲದ ರೋಬೋಟ್ ಇದಾಗಿದ್ದು, ಸುಮಾರು 2ರಿಂದ 3 ಲಕ್ಷ ರೂ. ವೆಚ್ಚ ತಗಲುತ್ತದೆ. ದಟ್ಟಣೆ ಅವಧಿ ಹೊರತು ಪಡಿಸಿ ಇತರ ಸಮಯದಲ್ಲಿ ರೋಬೊ ಮೂಲಕ ಸೇವೆ ನೀಡುತ್ತಿದ್ದೇವೆ. ಗ್ರಾಹಕರ ಸಂಖ್ಯೆ ಹೆಚ್ಚಾಗಿದ್ದಲ್ಲಿ ಅದರ ಸಂಚಾರಕ್ಕೆ ಹಿನ್ನಡೆಯಾಗುತ್ತದೆ. ಏಕಕಾಲಕ್ಕೆ ಹಲವು ವಸ್ತುಗಳನ್ನು ರವಾನಿಸಲು ಸಾಧ್ಯವಾಗುತ್ತದೆ ಎಂದು ಹೊಟೇಲ್ ನ ಪ್ರಮುಖರು ತಿಳಿಸಿದ್ದಾರೆ.
ಹೇಗಿದೆ ರೋಬೋಟ್
ಎಟಿಎಂ ಯಂತ್ರದಂತೆ ಸಣ್ಣ ಗಾತ್ರವನ್ನು ಹೊಂದಿದೆ. ಯಂತ್ರದ ತಳ ಭಾಗದಲ್ಲಿ ಮೆಷಿನ್ ಕಾರ್ಯಾಚರಿಸು ತ್ತದೆ. ನಾಲ್ಕು ರಾಕ್ ಗಳನ್ನು ಒಳ ಗೊಂಡಿದ್ದು, ಕಿರಿದಾದ ಚಕ್ರಗಳ ಸಹಾಯದಿಂದ ಚಲಿಸುತ್ತದೆ. ಮೊದಲೇ ಗೊತ್ತುಪಡಿಸಿದ ಮಾರ್ಗವನ್ನಷ್ಟೇ ಅದು ಬಳಸುತ್ತದೆ. ಆಯಾ ಟೇಬಲ್ ಬಳಿಗೆ ತೆರಳಿ ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ತಿರುಗಿ ನಿಲ್ಲುತ್ತದೆ. ಅಲ್ಲಿಂದ ಮತ್ತೆ ಯು ಟರ್ನ್ ಹೊಡೆದು ಮರಳಿ ತನ್ನ ಜಾಗಕ್ಕೆ ಬಂದು ನಿಲ್ಲುತ್ತದೆ. ರೋಬೊದ ಮುಂಭಾಗದಲ್ಲಿ ಸ್ಟ್ರೀನ್ ಇದ್ದು, ಅದರಲ್ಲಿ ಟೇಬಲ್ ವಿವರವಿರುತ್ತದೆ. ಸ್ಟ್ರೀನ್ ಟಚ್ ಮಾಡಿದಾಗ ಅದರಲ್ಲಿ ಆಯ್ಕೆಗಳು ಬರುತ್ತವೆ. ಟೇಬಲ್ ಸಂಖ್ಯೆಯನ್ನು ಒತ್ತಿದರೆ ಆಯಾ ಜಾಗಕ್ಕೆ ಚಲಿಸುತ್ತದೆ. ಅಲ್ಲದೆ, ಅಲ್ಲಿಂದ ಚಾರ್ಜಿಂಗ್ ಪಾಯಿಂಟ್ಗೆ ತೆರಳಲು ಮಾರ್ಗ ಸೂಚಿಸಲಾಗಿದ್ದು, ಆಯ್ಕೆ ಒತ್ತಿದರೆ ಅದರಷ್ಟಕ್ಕೆ ಚಾರ್ಜಿಂಗ್ ಪಾಯಿಂಟ್ ಗೂ ತೆರಳಿ ಕನೆಕ್ಟ್ ಆಗುತ್ತದೆ. ಇದರಲ್ಲಿ ಆಹಾರ ಇರಿಸಲು ಹಾಗೂ ತೆಗೆಯಲು ಜನರ ಸಹಾಯ ಅಗತ್ಯ. ಆಯಾ ಟೇಬಲ್ ಬಳಿಯಲ್ಲಿ ಆಹಾರವನ್ನು ಪಡೆದುಕೊಳ್ಳಲು ಹಾಗೂ ಆಹಾರ ತೆಗೆದುಕೊಂಡಿರುವುದನ್ನು ತಿಳಿಸಲು ಆಡಿಯೋ ಸಂದೇಶ ನೀಡುತ್ತದೆ.
ಅಡ್ಡ ಬಂದರೆ ಚಲಿಸದು
ರೋಬೊ ಸೆನ್ಸಾರ್ಸಹಾಯದಿಂದ ಕೆಲಸ ಮಾಡುತ್ತದೆ. ಆ ಕಾರಣದಿಂದಾಗಿ ದಾರಿಯಲ್ಲಿ ಯಾರಾದರು ಅಥವಾ ಯಾವುದಾದರು ವಸ್ತು ಅಡ್ಡವಿದ್ದರೆ, ಅದು ಮುಂದಕ್ಕೆ ಚಲಿಸುವುದಿಲ್ಲ. ಅಲ್ಲೇ ನಿಲ್ಲುತ್ತದೆ. ಮೊದಲೇ ಸೂಚಿಸಿದ 3 ಅಡಿ ದಾರಿ ಮುಕ್ತವಾಗಿದ್ದರೆ ಮಾತ್ರವೇ ಚಲಿಸುತ್ತದೆ. ಮುಂಭಾಗದಲ್ಲಿದ್ದವರು ಬದಿಗೆ ಸರಿದ ಬಳಿಕ ಅದು ತನ್ನಷ್ಟಕ್ಕೆ ಮತ್ತೆ ಮುಂದಕ್ಕೆ ಸಾಗುತ್ತದೆ.
ನಮ್ಮಲ್ಲಿರುವ ಎಲ್ಲ ಟೇಬಲ್ ಗಳಿಗೂ ನಂಬರ್ನೀಡಲಾಗಿದೆ. ರೋಬೊದಲ್ಲೂ ತೆರಳಬೇಕಾದ ಜಾಗದ ಬಗ್ಗೆ ಟೇಬಲ್ ಸಂಖ್ಯೆಯ ಆಧಾರದಲ್ಲಿ ಮಾರ್ಫಿಂಗ್ ಮಾಡಲಾಗಿದೆ. ತಿಂಡಿ ತಿನಿಸು ತಯಾರಾದ ಕೂಡಲೇ ಅದರಲ್ಲಿ ಇರಿಸಿ ಟೇಬಲ್ ನಂಬರ್ಒತ್ತಿದ್ದಲ್ಲಿ ಆಹಾರವನ್ನು ಆ ಟೇಬಲ್ಗೆ ರವಾನಿಸುತ್ತದೆ. ಬಳಿಕ ಫುಡ್ ರಿಸೀವ್ ಒತ್ತಿದ್ದಲ್ಲಿ ತನ್ನ ಹಿಂದಿನ ಜಾಗಕ್ಕೆ ಮರಳಿ ನಿಲ್ಲುತ್ತದೆ. – ಪ್ರವೀಣ್ ಶೆಟ್ಟಿ, ಯುನಿಟ್ ಮ್ಯಾನೇಜರ್ಪಾಕಶಾಲ ಹೊಟೇಲ್ ಮಂಗಳೂರು




