ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ; ದಿಲ್ಲಿ ಸೇರಿ ಹಲವು ರಾಜ್ಯದಲ್ಲಿ ಪ್ರತಿಭಟನೆ

Share with

ನವದೆಹಲಿ: ಪ್ರಸಕ್ತ ವರ್ಷದ ನೀಟ್-ಯುಜಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಬೆನ್ನಲ್ಲೇ ಪರೀಕ್ಷೆ ರದ್ದಾಗಿರುವ ಕಾರಣ ದೇಶಾದ್ಯಂತ ವಿದ್ಯಾರ್ಥಿಗಳ ಆಕ್ರೋಶ ಹೆಚ್ಚಾಗಿದ್ದು, ದೆಹಲಿ ಸೇರಿ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಳು ಮುಂದುವರಿದಿವೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಬುಧವಾರದಂದು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ(ಎನ್‌ಟಿಎ) ಕೇಂದ್ರ ಕಚೇರಿಯೆದುರು ಪ್ರತಿಭಟನೆ ನಡೆಸಿದೆ. ಈ ವೇಳೆ ಕಚೇರಿಯೊಳಗೆ ನುಗ್ಗಲು ಸಹ ವಿದ್ಯಾರ್ಥಿಗಳು ಯತ್ನಿಸಿದ್ದು, ಪೊಲೀಸರು ತಡೆದಿದ್ದಾರೆ. ಬೆನ್ನಲ್ಲೇ ಎನ್‌ಟಿಎ ಕಚೇರಿಗೆ ಹೆಚ್ಚುವರಿ ಭದ್ರತೆಯನ್ನು ಒದಗಿಸಲಾಗಿದೆ.

ರಾಷ್ಟ್ರೀಯ ವಿದ್ಯಾರ್ಥಿ ಸಂಘ(ಎನ್‌ಎಸ್‌ಯುಐ)ವು ಸಹ ದೆಹಲಿಯ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನಿವಾಸದೆದುರು ಪ್ರತಿಭಟನೆ ನಡೆಸಿದ್ದು, ಅವರ ರಾಜೀನಾಮೆಗೆ ಆಗ್ರಹಿಸಿದೆ ಹಾಗೂ ಹಿಮಾಚಲ ಪ್ರದೇಶದಲ್ಲೂ ಪ್ರತಿಭಟನೆ ನಡೆಸಿದೆ. ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಕೇರಳದಾದ್ಯಂತ ಸ್ಪೂಡೆಂಟ್ ಫೆಡರೇಷನ್ ಆಫ್ ಇಂಡಿಯಾ ಪ್ರತಿಭಟನೆ ನಡೆಸಿದೆ. ಇದಲ್ಲದೇ ಅರುಣಾಚಲ ಪ್ರದೇಶ, ಜಾರ್ಖಂಡ್, ರಾಜಸ್ಥಾನ, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ನಡೆದಿದೆ.

ಸುಪ್ರೀಂಕೋರ್ಟ್‌ಲ್ಲಿ ಪ್ರಕರಣ: ಪರೀಕ್ಷೆ ನಡೆಸಲು ಎನ್‌ಟಿಎ ವಿಫಲವಾಗಿದ್ದು, ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ಮತ್ತೊಮ್ಮೆ ಪರೀಕ್ಷೆ ನಡೆಸುವಂತೆ ಕೋರಿ ಅಖಿಲ ಭಾರತ ವೈದ್ಯಕೀಯ ಸಂಘಗಳ ಒಕ್ಕೂಟವು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಎನ್‌ಟಿಎಗೆ ಪರ್ಯಾಯ ಪ್ರಾಧಿಕಾರ ನೇಮಿಸಲು ಅಥವಾ ಪ್ರಾಧಿಕಾರದ ವ್ಯವಸ್ಥೆಯನ್ನು ಮರುನಿರ್ಮಾಣ ಮಾಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.


Share with

Leave a Reply

Your email address will not be published. Required fields are marked *