ವಾರದೊಳಗೆ ಚಿನ್ನಾಭರಣದೊಂದಿಗೆ ನಾಪತ್ತೆಯಾಗಿದ್ದ ನವ ವಧು ತವರು ಮನೆಯಲ್ಲಿ ಪತ್ತೆ..! ಕಾರಣ ನಿಗೂಢ..!

Share with

ಕಡಬ: ಮದುವೆಯಾಗಿ ಒಂದು ವಾರದೊಳಗೆ ಮಧ್ಯರಾತ್ರಿ ಗಂಡನ ಮನೆಯಿಂದ ಚಿನ್ನಾಭರಣಗಳೊಂದಿಗೆ ನಿಗೂಢವಾಗಿ ನಾಪತ್ತೆಯಾಗಿದ್ದ ನವವಿವಾಹಿತೆಯ ಹೈಡ್ರಾಮಾ ಸುಖಾಂತ್ಯ ಕಂಡಿದೆ. ಕಡಬ ತಾಲೂಕಿನ ನೂಜಿಬಾಳ್ತಿಲದಿಂದ ನಾಪತ್ತೆಯಾಗಿದ್ದ ಯುವತಿ ಕೊನೆಗೂ ಶಿವಮೊಗ್ಗದ ತನ್ನ ತವರು ಮನೆಯಲ್ಲಿ ಪತ್ತೆಯಾಗಿದ್ದು ಆತಂಕದಲ್ಲಿದ್ದ ಕುಟುಂಬಸ್ಥರು ಹಾಗೂ ಪೊಲೀಸರು ನಿಟ್ಟುಸಿರು ಬಿಡುವಂತಾಗಿದೆ.

ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ನಿವಾಸಿ ಮೊಹಮ್ಮದ್ ಆಶಿಕ್ (29), ಶಿವಮೊಗ್ಗದ ಆರ್ ಫೈನ್ ಮೆಹತಾಬ್ (18) ಎಂಬವಳೊಂದಿಗೆ ಕಳೆದ ಮೇ 31 ರಂದು ಶಿವಮೊಗ್ಗದ ಮಸೀದಿಯೊಂದರಲ್ಲಿ ಮುಸ್ಲಿಂ ಧಾರ್ಮಿಕ ವಿಧಿವಿಧಾನದಂತೆ ವಿವಾಹವಾಗಿತ್ತು. ಜೂನ್ 2 ರಂದು ಕಲ್ಲುಗುಡ್ಡೆಯಲ್ಲಿ ಅದ್ಧೂರಿ ಮದುವೆ ಔತಣಕೂಟವೂ ನಡೆದಿತ್ತು. ಈ ನಡುವೆ ಜೂನ್ 6ರ ರಾತ್ರಿ ಎಲ್ಲರಂತೆ ದಂಪತಿಗಳೂ ಊಟ ಮುಗಿಸಿ ಮಲಗಿದ್ದರು. ಮಧ್ಯರಾತ್ರಿ 12 ಗಂಟೆಗೆ ಪತಿ ಆಶಿಕ್ ಎದ್ದು ನೋಡಿದಾಗಲೂ ಪತ್ನಿ ಪಕ್ಕದಲ್ಲೇ ಇದ್ದಳು. ಆದರೆ, ಜೂನ್ 7ರ ನಸುಕಿನ ಜಾವ ಸರಿಯಾಗಿ 2:00 ಗಂಟೆಗೆ ಆಶಿಕ್ ಅವರ ಮೊಬೈಲ್‌ನಲ್ಲಿ ದಿಢೀರನೆ ಅಲಾರಾಂ ರಿಂಗಣಿಸಿದೆ. ಅಲಾರಾಂ ಸದ್ದಿಗೆ ಆಶಿಕ್ ಎಚ್ಚರಗೊಂಡು ನೋಡುವಷ್ಟರಲ್ಲಿ ಪತ್ನಿ ಮೆಹತಾಬ್‌ ನಾಪತ್ತೆಯಾಗಿದ್ದಳು. ಮೈಮೇಲಿದ್ದ ಚಿನ್ನಾಭರಣಗಳ ಸಮೇತ ಯಾರಿಗೂ ತಿಳಿಯದ೦ತೆ ನಾಪತ್ತೆಯಾದ ಕಾರಣ ಮಾತ್ರ ಇನ್ನೂ ನಿಗೂಢ.

ಪತ್ನಿ ಕಾಣೆಯಾದ ತಕ್ಷಣ ಗಾಬರಿಯಾದ ಪತಿ ಆಶಿಕ್ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸುತ್ತಿದ್ದಂತೆಯೇ, ಮೆಹತಾಬ್ ಶಿವಮೊಗ್ಗದ ತನ್ನ ತವರು ಮನೆಗೆ ಸುರಕ್ಷಿತವಾಗಿ ಬಂದು ತಲುಪಿರುವ ಸುದ್ದಿ ಬ೦ದಿದೆ.

ಪ್ರೀತಿ ಪ್ರೇಮದ ಹಿನ್ನೆಲೆಯೇ? ಅಥವಾ ಬೇರೆನಾದರೂ ಕಾರಣವಿದೆಯೇ? ಎಂದು ಕಡಬ ಪೊಲೀಸ್ ಠಾಣೆಯಲ್ಲಿ ತನಿಖೆಗೊಳಪಡಿಸಲಾಗುತ್ತಿದೆ.


Share with

Leave a Reply

Your email address will not be published. Required fields are marked *