ಕಾಸರಗೋಡು: ಹಲವು ಸಂಕೀರ್ಣ ಅಪರಾಧ ಪ್ರಕರಣಗಳನ್ನು ಭೇದಿಸಿ ಜನಪ್ರಿಯತೆ ಗಳಿಸಿದ್ದ ಕಾಸರಗೋಡು ಕ್ರೈಂ ಬ್ರಾಂಚ್‌ನ ನಿವೃತ್ತ ಎಸ್.ಐ. ಧನ್‌ರಾಜ್ (65) ಅವರು ಪಾರೆಕಟ್ಟೆಯ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೂಲತಃ ಕಣ್ಣೂರು ಜಿಲ್ಲೆಯವರಾದ ಧನ್‌ರಾಜ್ ಅವರು ನಿವೃತ್ತಿಯ ಬಳಿಕ ಪಾರೆಕಟ್ಟೆಯಲ್ಲಿ ಮನೆ ನಿರ್ಮಿಸಿ ನೆಲೆಸಿದ್ದರು. ಸೋಮವಾರ ಬೆಳಿಗ್ಗೆ ಇವರು ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣವೇ ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
ಕಾಸರಗೋಡು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದ ಇವರು, ಅನೇಕ ಕಠಿಣ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿದ್ದರು. ಸೇವಾ ನಿವೃತ್ತಿಯ ನಂತರ ಚೆರ್ಕಳದ ಖಾಸಗಿ ಆಸ್ಪತ್ರೆಯೊಂದರಲ್ಲಿ ಭದ್ರತಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ, ಆರೋಗ್ಯ ಸಮಸ್ಯೆಯ ಕಾರಣದಿಂದಾಗಿ 2 ತಿಂಗಳ ಹಿಂದಷ್ಟೇ ಆ ಸೇವೆಯನ್ನು ತೊರೆದಿದ್ದರು. ಕಣ್ಣೂರಿನ ಮುರಳೀಧರನ್ ಅವರ ಪುತ್ರರಾಗಿರುವ ಧನ್‌ರಾಜ್ ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.




