
ಅಪಘಾತದಲ್ಲಿ ಗಾಯಗೊಂಡವರಿಗೆ ಸಹಾಯ ಮಾಡುವ ಪರೋಪಕಾರಿಗಳಿಗೆ ರೂ.25 ಸಾವಿರ ಬಹುಮಾನ ನೀಡುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ.
ನಾಗಪುರದಲ್ಲಿ ನಡೆದ ರಸ್ತೆ ಸುರಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿದ ಗಡ್ಕರಿ ಅವರು, ಅಪಘಾತವಾದಾಗ ಮೊದಲ 1 ಗಂಟೆ ನಿರ್ಣಾಯಕವಾಗಿದ್ದು, ಆ ಅವಧಿಯಲ್ಲಿ ಸಂತ್ರಸ್ತರನ್ನು ಆಸ್ಪತ್ರೆಗಳಿಗೆ ಸಾಗಿಸುವ ವ್ಯಕ್ತಿಗೆ ಈಗ ನೀಡುತ್ತಿರುವ ಸಾವಿರ ರೂ.ಬಹುಮಾನ ಸಾಲುತ್ತಿಲ್ಲ. ಹೀಗಾಗಿ ಅವರಿಗೆ 25 ಸಾವಿರ ರೂ. ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಕೇಂದ್ರ ಸರಕಾರವು, ಅಪಘಾತಗಳಲ್ಲಿ ಗಾಯಗೊಂಡವರಿಗೆ ಮೊದಲ 7 ದಿನಗಳವರೆಗೆ 1.5 ಲಕ್ಷರೂ. ವರೆಗಿನ ಆಸ್ಪತ್ರೆ ವೆಚ್ಚವನ್ನು ಸಹ ಭರಿಸಲಿದೆ. ಇದು ರಾಜ್ಯ ಹೆದ್ದಾರಿಗಳಲ್ಲಿ ಗಾಯಗೊಂಡರೂ ಅನ್ವಯಿಸುತ್ತದೆ ಎಂದು ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಅಪಘಾತಕ್ಕೊಳಗಾದವರಿಗೆ ಸಹಾಯ ಮಾಡುವವರಿಗೆ ಬಹುಮಾನ ನೀಡುವ ಯೋಜನೆಯನ್ನು ಅಕ್ಟೋಬರ್ 2021 ರಲ್ಲಿ ಪ್ರಾರಂಭಿಸಲಾಯಿತು.
ಈ ಯೋಜನೆಯ ಪ್ರಕಾರ, ಮಾರಣಾಂತಿಕ ಅಪಘಾತಕ್ಕೊಳಗಾದವರ ಜೀವವನ್ನು ಉಳಿಸುವ ಜನರಿಗೆ ತಕ್ಷಣದ ಸಹಾಯವನ್ನು ಒದಗಿಸಿ ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ ಗೋಲ್ಡನ್ ಅವರ್ (ಅಪಘಾತದ ನಂತರ ಮೊದಲ ಗಂಟೆ) ಒಳಗೆ ಆಸ್ಪತ್ರೆಗೆ ಸಾಗಿಸುವವರಿಗೆ ಬಹುಮಾನ ನೀಡಲಾಗುತ್ತದೆ.