ಮೂಡುಬಿದಿರೆ: ನೆಲ್ಲಿಕಾರು ಪರಿಸರದ ವೃದ್ಧೆ ಯೋರ್ವರು ಬಾವಿಗೆ ಬಿದ್ದು ಗಾಯಗೊಂಡಿರುವ ಘಟನೆ ನಡೆದ ಬೆನ್ನಲ್ಲೇ, ಅದೇ ಗ್ರಾಮದ ರಿಕ್ಷಾ ಚಾಲಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ನೆಲ್ಲಿಕಾರಿನ ಸತೀಶ್ ಶೆಟ್ಟಿ (45) ಆತ್ಮಹತ್ಯೆ ಮಾಡಿಕೊಂಡ ಚಾಲಕನಾಗಿದ್ದು, ಪದ್ಮಾವತಿ (70) ಬಾವಿಗೆ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಮಹಿಳೆ.
ಮನೆಯಲ್ಲಿ ಒಬ್ಬರೇ ವಾಸವಿದ್ದ ಪದ್ಮಾವತಿ ಅವರು ಅಗತ್ಯ ಸಾಮಗ್ರಿಗಳನ್ನು ತರಲು ಮತ್ತು ಪ್ರಯಾಣಕ್ಕಾಗಿ ಸತೀಶ್ ಶೆಟ್ಟಿ ಅವರ ರಿಕ್ಷಾವನ್ನೇ ಅವಲಂಬಿಸಿದ್ದರು. ಒಂದೇ ಊರಿನವರಾದ ಇವರಿಬ್ಬರು ಚಿರಪರಿಚಿತರಾಗಿದ್ದರು.
ಶುಕ್ರವಾರ ಬೆಳಗ್ಗೆ ಪದ್ಮಾವತಿ ಅವರು ಬಾವಿಯೊಳಗೆ ಪತ್ತೆ ಯಾಗಿದ್ದಾರೆ. ಅವರನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅದೇ ದಿನ ಚಾಲಕ ಸತೀಶ್ ಶೆಟ್ಟಿ ನಾಪತ್ತೆಯಾಗಿದ್ದು, ಶನಿವಾರ ಅವರ ಶವ ರೆಂಜಾಳದ ಹಾಡಿಯಲ್ಲಿ ಪತ್ತೆಯಾಗಿದೆ. ಈ ಎರಡು ಘಟನೆಗಳ ನಡುವಿನ ನೈಜ ಕಾರಣವೇನೆಂಬುದು ತಿಳಿದು ಬಂದಿಲ್ಲ. ಮೂಡುಬಿದಿರೆ ಮತ್ತು ಕಾರ್ಕಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.




