ಕೊಲಂಬೊ: ಹೊಸ ಪಕ್ಷ ಸ್ಥಾಪಿಸಿ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಯ ಸ್ಪರ್ಧೆಯಲ್ಲಿಯೇ ಗೆಲುವು ಸಾಧಿಸಿದ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಐತಿಹಾಸಿಕ ಜಯಗಳಿಸಿದ ಬೆನ್ನಲ್ಲೇ, ನೆರೆರಾಷ್ಟ್ರ ಶ್ರೀಲಂಕಾದ ಹಲವು ರಾಜಕೀಯ ನಾಯಕರು ಅವರಿಗೆ ಶುಭಕೋರಿದ್ದಾರೆ.

ಶ್ರೀಲಂಕಾ ಲೋಕಸಭೆಯ ವಿರೋಧ ಪಕ್ಷವಾದ ಪೊದುಜನ ಪೆರಮುನಾದ ರಾಷ್ಟ್ರೀಯ ಸಂಘಟಕ ಮತ್ತು ಸಂಸದ ನಮಲ್ ರಾಜಪಕ್ಷೆ ಕೂಡ ವಿಜಯ್ ಗೆಲುವಿಗೆ ಅಭಿನಂದನೆ ತಿಳಿಸಿದ್ದಾರೆ. ‘ಐತಿಹಾಸಿಕ ಗೆಲುವಿಗೆ ಅಭಿನಂದನೆಗಳು. ಇನ್ನೂ ನಿಜವಾದ ಕೆಲಸ ಆರಂಭವಾಗಲಿದೆ. ನೀವು ಮತ್ತು ನಿಮ್ಮ ತಂಡಕ್ಕೆ ಮುಂಬರುವ ಸವಾಲುಗಳನ್ನು ಎದುರಿಸುವ ಬಲ ಸಿಗಲಿ. ಜನರಿಗೆ ಸಹಾಯವಾಗುವ ಯೋಜನೆಗಳನ್ನು ಜಾರಿಗೊಳಿಸಿ. ವಿಜಯ್ ಆಡಳಿತಾವಧಿಯಲ್ಲಿ ದ್ವಿಪಕ್ಷೀಯ ಸಂಬಂಧಗಳು ಸುಧಾರಿಸುವ ಮತ್ತು ಶ್ರೀಲಂಕಾದೊಂದಿಗಿನ ನಂಟು ಗಟ್ಟಿಯಾಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಲಂಕಾದ ತಮಿಳು ಪಕ್ಷ ಅಭಿನಂದನೆ:
ಬಟ್ಟಿಕಲೋವಾ ಜಿಲ್ಲೆಯ ಸಂಸದ ಶನಕಿಯಾನ್ ರಸಮಾಣಿಕಂ ಅವರು ಕೂಡ ವಿಜಯ್ ಗೆಲುವಿಗೆ ಶುಭಾಶಯಗಳ ತಿಳಿಸಿದ್ದಾರೆ. ಟಿವಿಕೆ ಗೆಲುವಿಗೆ ‘ವಿಜಯ್ಗೆ ಅಭಿನಂದನೆಗಳು, ಇದೊಂದು ಐತಿಹಾಸಿಕ ಗೆಲುವಾಗಿದೆ. ಶ್ರೀಲಂಕಾದ ಪ್ರಮುಖ ತಮಿಳು ಪಕ್ಷವಾದ ನಾವು, ತಮಿಳುನಾಡು ಸರ್ಕಾರದೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದೇವೆ’ ಎಂದು ಹೇಳಿದ್ದಾರೆ.
ತಮಿಳರು ಹೆಚ್ಚಿನ ಸಂಖ್ಯೆಯಲ್ಲಿರುವ ಶ್ರೀಲಂಕಾದ ಉತ್ತರ ಭಾಗದಲ್ಲಿ ಟಿವಿಕೆಯ ವಿಜಯ್ ಅವರ ಗೆಲುವಿನ ನಂತರ ಸಂಭ್ರಮಾಚರಣೆ ಮಾಡಲಾಗಿದೆ. ಅದರಲ್ಲಿ ಹೆಚ್ಚಿನ ಸಂಖ್ಯೆಯ ಯುವಕರು ಭಾಗವಹಿಸಿದ್ದರು ಎಂದು ವರದಿಯಾಗಿದೆ. 234 ಸದಸ್ಯ ಬಲದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ 108 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಲಂಕಾದಲ್ಲಿ ವಿಜಯ್ ಗೆಲುವು ಸುದ್ದಿಗೆ ಆದ್ಯತೆ:
ಶ್ರೀಲಂಕಾದ ತಮಿಳು ಮಾಧ್ಯಮಗಳು ಕೂಡ ತಮಿಳುನಾಡಿನಲ್ಲಿ ಟಿವಿಕೆ ವಿಜಯ್ ಗೆಲುವಿನ ಕುರಿತ ವರದಿ, ಚಿತ್ರಗಳ ಪ್ರಕಟಿಸಿ ಪ್ರಮುಖ ಆದ್ಯತೆಗಳ ನೀಡಿದೆ.




