ಪುತ್ತೂರು: ಅಕ್ಷಯ ಕಾಲೇಜಿನ ಬೈಟ್‌ಬಿಟ್ಸ್ – ಐಟಿ ಕ್ಲಬ್ ಹಾಗೂ ಐಕ್ಯೂಎಸಿ ಸಂಯುಕ್ತ ಆಶ್ರಯದಲ್ಲಿ ಅಭಿಜ್ಞ ಎಜುಕೇಶನ್ ಸಹಯೋಗದೊಂದಿಗೆ ಒಡಂಬಡಿಕೆ (MoU) ಸಹಿ ಕಾರ್ಯಕ್ರಮ ಹಾಗೂ ಕೃತಕ ಬುದ್ಧಿಮತ್ತೆ (Artificial Intelligence), ಸೈಬರ್ ಭದ್ರತೆ(Cyber Security), ಡಾಟಾ ಅನಾಲಿಟಿಕ್ಸ್(Data Analytics) ಕುರಿತು ಓರಿಯೆಂಟೇಶನ್ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ವಿದ್ಯಾರ್ಥಿಗಳಿಗೆ ಕೈಗಾರಿಕಾ ಅಗತ್ಯಗಳಿಗೆ ತಕ್ಕ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ. ಶಶಾಂಕ್ ಶೆಟ್ಟಿ ಸಹ ಪ್ರಾಧ್ಯಾಪಕರು, ಸಿಎಸ್‌ಇ ವಿಭಾಗ, ಎನ್‌ಎಂಎಎಂಐಟಿ ಹಾಗೂ ಸಹ-ಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಇನ್‌ಸ್ಪಿರಾಂಟಿ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ ಮತ್ತು ಡೇಟಾ ಅನಾಲಿಟಿಕ್ಸ್ ಕ್ಷೇತ್ರಗಳಲ್ಲಿ ಅಪಾರ ಉದ್ಯೋಗಾವಕಾಶಗಳಿವೆ ಎಂದು ತಿಳಿಸಿದರು. ತಾಂತ್ರಿಕ ಜ್ಞಾನದ ಜೊತೆಗೆ ಪ್ರಾಯೋಗಿಕ ಅನುಭವ ಮತ್ತು ನಿರಂತರ ಕಲಿಕೆಯೇ ಯಶಸ್ಸಿನ ಗುಟ್ಟು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಜಯಂತ ನಡುಬೈಲ್, ಅಧ್ಯಕ್ಷರು, ಅಕ್ಷಯ ಸಮೂಹ ಸಂಸ್ಥೆಗಳು, ವಿದ್ಯಾರ್ಥಿಗಳನ್ನು ಅಭಿನಂದಿಸಿ, ಶಿಕ್ಷಣ ಮತ್ತು ಕೈಗಾರಿಕೆಯ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಇಂತಹ ಒಡಂಬಡಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು. ಈ ಸಹಭಾಗಿತ್ವದಿಂದ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ಹಾಗೂ ಉದ್ಯೋಗಾವಕಾಶಗಳು ದೊರೆಯಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಅಭಿಜ್ಞ ಎಜುಕೇಶನ್‌ನ ಸಂಸ್ಥಾಪಕ ಹಾಗೂ ಮಾಲೀಕರಾದ ಶ್ರೀ ಅಭಿಲಾಷ್ ಕ್ಷತ್ರಿಯ ಮಾತನಾಡಿ, ಈ ಒಡಂಬಡಿಕೆಯಡಿ ವಿದ್ಯಾರ್ಥಿಗಳಿಗೆ AI, Cyber Security ಹಾಗೂ Data Analytics ವಿಷಯಗಳಲ್ಲಿ ವಿಶೇಷ ತರಬೇತಿ ನೀಡಲಾಗುವುದು ಎಂದರು. ತರಬೇತಿಯ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಲೈವ್ ಇಂಡಸ್ಟ್ರಿ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳುವ ಅವಕಾಶ ಕಲ್ಪಿಸಲಾಗುವುದು. ಕೋರ್ಸ್ ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ (Certificate) ನೀಡುವುದರ ಜೊತೆಗೆ ಇಂಟನ್‌ಶಿಪ್ ಅವಕಾಶ ಕೂಡ ಒದಗಿಸಲಾಗುವುದು ಎಂದು ತಿಳಿಸಿದರು. ಇದರಿಂದ ವಿದ್ಯಾರ್ಥಿಗಳು ಕೈಗಾರಿಕಾ ಅನುಭವವನ್ನು ಪಡೆದು ತಮ್ಮ ವೃತ್ತಿ ಜೀವನಕ್ಕೆ ಭದ್ರ ಅಡಿಪಾಯ ಹಾಕಿಕೊಳ್ಳಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಶ್ರೀ ಸಂಪತ್ ಕೆ. ಪಕ್ಕಳ, ಆಡಳಿತಾಧಿಕಾರಿ ಶ್ರೀ ಅರ್ಪಿತ್ ಟಿ.ಎ., ಹಾಗೂ ಬಿಸಿಎ ವಿಭಾಗದ ಮುಖ್ಯಸ್ಥೆ ಶ್ರೀಮತಿ ದೀಕ್ಷಾ ರೈ ಉಪಸ್ಥಿತರಿದ್ದರು.
ಕಾರ್ಯಕ್ರಮವು ಕು. ಲಾವಣ್ಯ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಶ್ರೀ ಅಭಿಲಾಷ್ ಕ್ಷತ್ರಿಯ ಅವರು ಎಲ್ಲರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಯನ್ನು ಶ್ರೀಮತಿ ದೀಕ್ಷಾ ರತ್ನ ಪರ ‘ಚಯಿಸಿದರು. ಕಾರ್ಯಕ್ರಮವನ್ನು ಶ್ರೀಮತಿ ಸುಪ್ರಭಾ ಕೆ. ಅವರು ನಿರೂಪಿಸಿದರು. ಶ್ರೀ ಸರೋಶ್ ನಾಯಕ್ ಅವರು ವಂದನಾರ್ಪಣೆ ಸಲ್ಲಿಸಿದರು.




